ಸುದ್ದಿ ಸಂಕ್ಷೇಪ
ಇಬ್ಬರು ಹೆದ್ದಾರಿ ಡಕಾಯಿತರ ಬಂಧನ
ಕೋಲಾರ: ವಿವಿಧೆಡೆ ನಡೆದ ಹೆದ್ದಾರಿ ಡಕಾಯಿತಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿ ಅವರಿಂದ 1.50 ಲಕ್ಷ ಮೌಲ್ಯದ ನಗ-ನಾಣ್ಯ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಯಲಹಂಕದ ಜಕ್ಕೂರು ಲೇಔಟ್ ನಿವಾಸಿ ಅಂಬರೀಶ್ (21) ಹಾಗೂ ಬೆಂಗಳೂರಿನ ಕೆಂಗೇರಿ ಬಳಿಯ ಭುವನೇಶ್ವರಿ ನಗರದ ಅಶೋಕ್ ಬಂಧಿತ ಡಕಾಯಿತರು. ಇವರಿಂದ ಎರಡು ದ್ವಿಚಕ್ರ ವಾಹನ, ಒಂದು ಚಿನ್ನದ ಉಂಗುರ, ಚಿನ್ನದ ಸರ ಹಾಗೂ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಕೋಲಾರ ಗ್ರಾಮಾಂತರ, ರಾಷ್ಟ್ರೀಯ ಹೆದ್ದಾರಿ, ಚಿಂತಾಮಣಿ ಗ್ರಾಮಾಂತರ, ಸಕಲೇಶಪುರ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸರಹದ್ದಿನಲ್ಲಿ ದರೋಡೆ ಮಾಡಿ ಪೊಲೀಸರಿಗೆ ತಲೆನೋವಾಗಿದ್ದರು. ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಆರ್. ಕುಮಾರಸ್ವಾಮಿ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಕೆ.ಎಸ್.ದೇವೇಂದ್ರಪ್ಪ, ಜಗದೀಶ್, ಸಿಬ್ಬಂದಿಗಳಾದ ಸೈಯದ್ ಖಾಸಿಂ, ಎಂ.ಆನಂದ್, ಹಮೀದ್ ಖಾನ್, ಮುನವೆಂಕಟಸಾಮಿ, ರಮೇಶ್ ಬಾಬು, ರಾಮಚಂದ್ರ, ರಮೇಶ್, ಮುರಳಿ, ಸಾದಿಕ್ ಪಾಷ, ಮಂಜುನಾಥ್, ಆರ್. ನಾರಾಯಣಸ್ವಾಮಿ, ಸುರೇಶ್, ಮಂಜುನಾಥ್, ಚಿಕ್ಕಆಂಜನಪ್ಪ ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ತಂಡದಲ್ಲಿದ್ದರು.
ಅನುಷ್ಠಾನಕ್ಕೆ ಒತ್ತಾಯ
ಕೋಲಾರ: ಡಾ.ಸರೋಜಿನಿ ಮಹಿಷಿ ಅವರು ಶಿಫಾರಸು ಮಾಡಿರುವ ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿ ನವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ಆಡಳಿತ ಮೂಲಕ ಸರ್ಕಾರಕ್ಕೆ ಮನವಿ ಕಳುಹಿಸಿಕೊಡಲಾಯಿತು.
ರಾಜ್ಯದಲ್ಲಿ ಸ್ಥಾಪನೆ ಆಗಿರುವ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗಬೇಕು. ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕೆಂದು ವೇದಿಕೆಯ ನಿಯೋಗ ಸರ್ಕಾರನ್ನು ಒತ್ತಾಯಿಸಿತು.
ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎನ್. ರಾಜಗೋಪಾಲ ಗೌಡ ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸುವಂತೆ ಕೋರಿದರು.
ಈ ಸಂದರ್ಭ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಉಮೇಶ್, ಹೊಳಲು ಮುನಿಸ್ವಾಮಿ, ಉಮೇಶಗೌಡ, ರಾಜ್ಯ ಕಾರ್ಯದರ್ಶಿ ಉಮೇಶ್, ಜಿಲ್ಲಾಧ್ಯಕ್ಷ ಚಿನ್ನ ವೆಂಕಟೇಶ್, ಮಹಿಳಾ ಘಟಕದ ಕೆ.ಕುಸುಮ, ಭರತ್, ಎಂ.ವಿ.ರಮೇಶ್, ಎಂ.ಅಶೋಕ್‌ಕುಮಾರ್ ಇನ್ನಿತರರು ಇದ್ದರು.