ಗ್ಲೋಬಲ್ ಸಂಸ್ಥೆಗೆ ಚಿನ್ನದ ಗಣಿ ಟೆಂಡರ್
ಕನ್ನಡಪ್ರಭ ವಾರ್ತೆ ಕೆಜಿಎಫ್ ಜು.9
ಕೇಂದ್ರ ಸರ್ಕಾರ ಚಿನ್ನದ ಗಣಿ ಮುನ್ನಡೆಸಲು ಸಾಧ್ಯವಾಗದ ಕಾರಣ ಗ್ಲೋಬಲ್ ಸಂಸ್ಥೆಗೆ ಟೆಂಡರ್ ನೀಡಲು ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು.
ಈ ನಿಟ್ಟಿನಲ್ಲಿ ಮಂಗಳವಾರ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಅಲ್ತಾಮಸ್ ಕಬೀರ್, ವಿಕ್ರಮಾಧ್ಯತ್ಯಸನ್ ಮತ್ತು ಕಬೀರ್ ಅವರಿದ್ದ ವಿಶೇಷ ಪೀಠ ಪರಿಶೀಲಿಸಿ ಗ್ಲೋಬಲ್ ಸಂಸ್ಥೆಗೆ ಚಿನ್ನದ ಗಣಿ ಟೆಂಡರ್ ನೀಡಲು ಸಮ್ಮತಿ ನೀಡಿದೆ.
ಈ ನಿಟ್ಟಿನಲ್ಲಿ ಕೆಜಿಎಫ್ ಕ್ಷೇತ್ರದ ಚಿನ್ನದ ಗಣಿ ಕಾರ್ಮಿಕರು ಮತ್ತು ಕಾರ್ಮಿಕರ ಒಕ್ಕೂಟದ ಸಂಘಗಳು ಹಾಗೂ ಕೆಜಿಎಫ್ ಕ್ಷೇತ್ರದ ಲಕ್ಷಾಂತರ ಜನತೆಗೆ ಸಂತಸ ತಂದಂತಾಗಿದೆ ಎಂದು ಕಾರ್ಮಿಕ ಒಕ್ಕೂಟ ಸಂಘದ ಅಧ್ಯಕ್ಷ ಯಶ್ವಂತರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.
ಏನದು ಪ್ರಕರಣ: 2001ರಲ್ಲಿ ಬಿಜಿಎಂಎಲ್ ಚಿನ್ನದ ಗಣಿಯನ್ನು ಮುಚ್ಚಿ 13 ವರ್ಷ ಕಳೆಯುತ್ತಿದ್ದು, ಕೇಂದ್ರ ಸರ್ಕಾರ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್‌ಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಬಿಜಿಎಂಎಲ್ ಚಿನ್ನದ ಗಣಿ ಸೊಸೈಟಿ ಹಿರಿಯ ವಕೀಲರಾದ ಮೀನಾಕ್ಷಿ ಅರೋರ, ಜಿ.ಜೆ.ಗುಪ್ತ ಹಾಗೂ ಇತರರು ವಾದ ಮಂಡಿಸಿ ಚಿನ್ನದ ಗಣಿಯನ್ನು ಮುಚ್ಚಿ 13 ವರ್ಷಗಳು ಕಳೆದಿದೆ ಇದರಿಂದ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಿದ್ದು ಹಲವಾರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಅವರಿಗೆ ಸಿಗಬೇಕಾದ ಶೇ.100 ವಿಆರ್‌ಎಸ್ ಬಡ್ಡಿ ಹಣ 55 ಕೋಟಿ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದ್ದು ಕೋಟ್ಯಂತರ ಬಿಜಿಎಂಎಲ್ ಆಸ್ತಿ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ವಿಳಂಬ ಮಾಡದೆ ಬೇಗನೆ ಇತ್ಯರ್ಥ ಮಾಡಬೇಕು ಎಂದು ಸಲ್ಲಿಸಿದ ಬೆಂಚ್‌ನಲ್ಲಿ ಚರ್ಚಿಸಿ ಕೇಂದ್ರ ಸರ್ಕಾರ ಚಿನ್ನದ ಗಣಿಯನ್ನು ಮುನ್ನಡೆಸಲು ಸಾಧ್ಯವಾಗದ ಕಾರಣ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್‌ಗೆ ನೀಡಲು ಅರ್ಜಿ ಸಲ್ಲಿಸಿದ್ದು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿ 2006ರ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಿದೆ ಆದ್ದರಿಂದ ಬಿಜಿಎಂಎಲ್ ಚಿನ್ನದ ಗಣಿಯನ್ನು ಸರ್ಕಾರವೇ ನಡೆಸಬೇಕು ಎಂಬ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಬಿಜಿಎಂಎಲ್ ಚಿನ್ನದ ಗಣಿಯನ್ನು ಗ್ಲೋಬಲ್ ಡೆಂಡರ್ ನಡೆಸಲು ಮಹತ್ವದ ತೀರ್ಪನ್ನು ನೀಡಿರುವುದಾಗಿ ಅಧ್ಯಕ್ಷ ಯಶ್ವಂತ್‌ರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ಯರ್ಥಕ್ಕೆ ಸೂಚನೆ: ಅದೇ ರೀತಿ ಬೆಮೆಲ್ ಆಡಳಿತ ಮಂಡಳಿ ಬಿಜಿಎಂಎಲ್‌ಗೆ ಸೇರಿದ 1101 ಎಕರೆ ಲೀಸ್‌ಗೆ ನೀಡಿರುವುದನ್ನು ಜಮೀನನ್ನು ಬೆಮೆಲ್‌ಗೆ ಸ್ವಂತವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಈ ಬಗ್ಗೆ ಮಿನಿಸ್ಟ್ರೀ ಆಫ್ ಮೈನ್ಸ್ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತೆ ತಿಳಿಸಿದೆ ಎಂದರು.
ಕಾರ್ಮಿಕ ಒಕ್ಕೂಟಗಳ ಸಂಭ್ರಮ: ತೀರ್ಪು ಹೋರ ಬೀಳುತ್ತಿದ್ದಂತೆ ಕಾರ್ಮಿಕ ಕುಟುಂಬಗಳು, ಕಾರ್ಮಿಕ ಒಕ್ಕೂಟದ ಸಂಘಗಳ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು,ಜನತೆ ಸಂತಸಗೊಂಡಿದ್ದು ನಗರದ ಸೂರಜ್‌ಮುಲ್ ವೃತ್ತದಲ್ಲಿ ಪಟಾಕಿಗಳನ್ನುಸಿಡಿಸಿ,ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಹೋರಾಟಕ್ಕೆ ಸಂದ ಫಲ: ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ, ಮಾಜಿ ಶಾಸಕ ವೈ.ಸಂಪಂಗಿ, ಬಿಜಿಎಂಎಲ್ ಕಾರ್ಮಿಕರ ಒಕ್ಕೂಟ ಸಂಘಗಳ ಮುಖಂಡರು ಹಾಗೂ ಮತ್ತಿತರರು ಈ ಸಂಬಂಧ ಪ್ರತಿಕ್ರಿಯೆ ಬಿಜಿಎಂಎಲ್ ಚಿನ್ನದ ಗಣಿಯನ್ನು ಮುಚ್ಚಿ 13 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಸಂತಸ ತಂದಿದೆ. ಕಾರ್ಮಿಕರ ಬೇಡಿಕೆ, ಚಿನ್ನದ ಗಣಿ ಪುನರಾರಂಭಗೊಳಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಮತ್ತು ಕಾರ್ಮಿಕ ಒಕ್ಕೂಟದ ಸಂಘ ಮತ್ತು ಕಾರ್ಮಿಕರ ಪರ ಪ್ರತಿಭಟನೆಗಳು, ಹೋರಾಟಗಳು, ರೈಲ್ ರೋಕೋ, ದೆಹಲಿ ಚಲೋ, ಕೆಜಿಎಫ್ ಬಂದ್ ಹೋರಾಟಗಳಿಗೆ ಸಂದ ಜಯವಾಗಿದೆ ಎಂದರು.