ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಡೂಟ ಸವಿದು ಹೊರಟವರು ಬಾರದ ಲೋಕಕ್ಕೆ...

Mainashree
Updated On : 10 Jul 2013, 12:02 pm

ಚಿಕ್ಕಬಳ್ಳಾಪುರ: ಬಾಡೂಟ ಸವಿದು ಮತ್ತೆ ತಮ್ಮ ಗ್ರಾಮಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರದ ಮೂಲಕ ಸಾಗಬೇಕೇ ಅಥವಾ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ಮೂಲ ಕ ಸಾಗಬೇಕೇ ಎಂಬ ವಿಷಯದಲ್ಲಿ ಉಂಟಾದ ಗೊಂದಲದಲ್ಲಿ
ಸಂಭವಿಸಿದ ಲಾರಿ ಮತ್ತು ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಸಹೋದಯರಿಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಾವನ್ನಪ್ಪಲು ಕಾರಣವಾಯಿತು ಎಂಬ ಮಾತುಗಳು ಕೇಳಿ ಬಂದಿವೆ.
ತಾಲೂಕಿನ ದೊಡ್ಡಮರಳಿ ಗ್ರಾಮದ ಚನ್ನಭೈರೇಗೌಡ, ವೆಂಕಟಲಕ್ಷ್ಮಮ್ಮ, ಪಾರ್ವತಮ್ಮ, ರತ್ನಮ್ಮ ಮತ್ತು ಪ್ರಮೀಳಮ್ಮ ಸೇರಿದಂತೆ ಐವರು ಸಮೀಪದ ಸೊಪ್ಪಹಳ್ಳಿ ಗ್ರಾಮಕ್ಕೆ ತಮ್ಮ ನೆಂಟರ ಮನೆಯಲ್ಲಿ ನಡೆಯುತ್ತಿದ್ದ ಬಾಡೂಟ ಕಾರ್ಯಕ್ರಮಕ್ಕಾಗಿ ಮಂಗಳವಾರ ತೆರಳಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಮ್ಮ ಊರಿಗೆ ಅವಸರವಾಗಿ ಬಂದಿದ್ದಾರೆ. ಮಧ್ಯಾಹ್ನ 3.30ರ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆಯ ಸರ್ವಿಸ್ ರಸ್ತೆಗೆ ಬಂದ ಸಂದರ್ಭದಲ್ಲಿ ತಮ್ಮ ಊರಿಗೆ ಬೈಪಾಸ್ ರಸ್ತೆಯ ಮೂಲಕ ಸಾಗುವುದೇ ಇಲ್ಲವೇ ಚಿಕ್ಕಬಳ್ಳಾಪುರ ನಗರದ ಮೂಲಕ ಹೋಗೋಣವೇ ಚರ್ಚೆ ನಡೆಯಿತು ಎಂಬಂತೆ ಅಂಡರ್‌ಪಾಸ್ ಅನ್ನು ದಾಟಿಕೊಂಡ ಬಂದ ಕಾರು ಕೊನೆಯಲ್ಲಿ ದಿಕ್ಕು ಬದಲಾಯಿಸಿದೆ. ಇದಕ್ಕೆ ಪೂರಕ ಎನ್ನುವಂತೆ ಬಂದ ಮಾರ್ಗದ ಎಡಬದಿಯಲ್ಲಿ ತಮ್ಮ ಗ್ರಾಮಕ್ಕೆ ತೆರಳಲು ರಸ್ತೆಯಿದ್ದರೂ ಸಹ ಸ್ವಲ್ಪ ಮುಂದೆ ಬಂದು ಬಲಬದಿಯಲ್ಲಿ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳಲು ಯತ್ನಿಸಲಾಗಿದೆ.ಅಪಘಾತ ನಡೆದ ಸ್ಥಳದ ಸಮೀಪದ ತೋಟಗಳಲ್ಲಿ ಕೆಲಸ ಮಾಡುತ್ತ ಭೀಕರ ಅಪಘಾತ ಕಂಡ ಪ್ರತ್ಯಕ್ಷದರ್ಶಿಗಳು, ಮಂಚನಬಲೆಯಿಂದ ಬಂದ ಕಾರು ಸರ್ವಿಸ್ ರಸ್ತೆಯಲ್ಲಿ ಹಿಂದಕ್ಕೆ ಚಲಾಯಿಸಿಕೊಂಡು ಬೈಪಾಸ್ ರಸ್ತೆಗೆ ಬಂದಿತು. ಆಗ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಲಾರಿಯ ಚಾಲಕ ಅಡ್ಡ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಬ್ರೇಕ್ ಹಾಕಿದ. ಆದರೆ, ಲಾರಿ ನಿಯಂತ್ರಣಕ್ಕೆ ಬಾರದೇ ಉರುಳಿಕೊಂಡು ಬಂದು ಕಾರಿನ ಮೇಲೆ ಬಿತ್ತು.  
ಒಂದು ಕ್ಷಣದಲ್ಲಿ ನಡೆದ ಘಟನೆಯಿಂದ ಅಘಾತಕ್ಕೊಳಗಾಗಿ ಹತ್ತಿರ ಹೋಗಿ ನೋಡಿದಾಗ ಕಾರು ಲಾರಿಯಡಿ ಸಿಕ್ಕಿ ಹಾಕಿಕೊಂಡಿರುವುದು ಕಂಡು ಬಂತು. ತಕ್ಷಣ ಸುತ್ತಮುತ್ತಲಿನಿಂದ ಜನ ಬಂದು ಜಮಾಯಿಸಿದರು ಎಂದು ತಿಳಿಸಿದ್ದಾರೆ.
ಕಾರಿನ ಚಾಲಕ ಪಾರು: ಲಾರಿಯಡಿಗೆ ಸಿಲುಕಿದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ಸ್ಥಳದಲ್ಲಿಯೇ ತಲೆ ಕೆಳಗೆ ಹಾಕಿಕೊಂಡು ಕುಳಿತ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಚಾಲಕ ಚನ್ನಭೈರೇಗೌಡ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದವರು ಬಂದು ಅವರನ್ನು ರಕ್ಷಿಸಿದ್ದಾರೆ.
ಕಠಿಣ ಕಾರ್ಯಾಚರಣೆ: ಮಂಗಳವಾರ ಮಧ್ಯಾಹ್ನ 3.30 ರ ಸಮಯದಲ್ಲಿ ಅಪಘಾತ ಸಂಭವಿಸಿ ಲಾರಿಯಡಿಗೆ ಕಾರು ಸಿಲುಕಿಕೊಂಡಿದ್ದು ಇದನ್ನು ಬೇರ್ಪಡಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಕಾರಿನಡಿ ಸಿಲುಕಿಕೊಂಡಿರುವವರಲ್ಲಿ ಯಾರಾದರೂ ಬದುಕಿರಬಹುದೆಂಬ ಆಶಾ ಭಾವನೆಯಲ್ಲಿ ಜೆಸಿಬಿ ವಾಹನವನ್ನು ತರಿಸಿ ಕಾರನ್ನು ಲಾರಿಯಡಿಯಿಂದ ಹೊರ ತೆಗೆಯಲಾಯಿತು. ಆದರೆ, ಜೆಸಿಬಿ ಕೈಯಲ್ಲಾಗಲಿಲ್ಲ. ತಕ್ಷಣ ಕ್ರೇನ್ ಅನ್ನು ಸಹ ಲಾರಿಯನ್ನು ಎಳೆದುಕೊಂಡು ಕಾರನ್ನು ಮೇಲಕ್ಕೇತಲಾಯಿತು. ಇದಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಸಮಯ ಬೇಕಾಯಿತು.ಅಷ್ಟೊತ್ತಿಗಾಗಲೇ ಕಾರಿನಲ್ಲಿದ್ದ ಮಹಿಳೆಯರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ನಡುವೆ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಎನ್.ಶಿವಪ್ರಸಾದ್, ಡಿವೈಎಸ್‌ಪಿ ದೇವಯ್ಯ ಆಗಮಿಸಿದರು.
ರಸ್ತೆಯಲ್ಲಿ ಜನ ಸಾಗರ: ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಸುತ್ತಮುತ್ತಲ ಗ್ರಾಮಸ್ಥರು ಸಹ ನೆರವು ನೀಡಲು ನೆರೆದಿದ್ದರು. ಮತ್ತೊಂದೆಡೆ ಹೆಚ್ಚಿದ ಜನ ದಟ್ಟಣೆಯಿಂದ ಕಾರ್ಯಾಚರಣೆಗೆ ಕಿರಿಕಿರಿ ಉಂಟಾಯಿತು. ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಕೆಲ ವೇಳೆ ಲಾಠಿಗೆ ಕೆಲಸ ಹೇಳಬೇಕಾಯಿತು. ಇನ್ನೂ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement