ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಗಳೂರು ನೀರಾವರಿ ಯೋಜನೆ ಜಾರಿಯಾಗಲಿ

Mainashree
Updated On : 10 Jul 2013, 12:03 pm

ಕನ್ನಡಪ್ರಭ ವಾರ್ತೆ   ಮಾಲೂರು  ಜು.9
ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿರುವ ಬೆಂಗಳೂರಿನ ಕೊಳಚೆ ನೀರನ್ನು ಮುಗಳೂರು ಕಾಲುವೆಯಿಂದ ಮಾಲೂರು ತಾಲೂಕಿಗೆ ನೀರು ಹರಿಸುವ ಯೋಜನೆ ತಕ್ಷಣ ಜಾರಿ ತರಲೇ ಬೇಕು ಎಂದು ಮುಗಳೂರು ಕಾಲುವೆ ನೀರು ಹೋರಾಟ ಸಮಿತಿಯ ಅಧ್ಯಕ್ಷ ತ್ಯಾವನಹಳ್ಳಿ ಡಾ.ಎಂ. ಗೋಪಾಲ್ ಗೌಡ ಆಗ್ರಹಿಸಿದ್ದಾರೆ.  ಅವರು ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಯಲುಸೀಮೆಯ 177 ತಾಲೂಕುಗಳಿಗೆ ನೀರುಣಿಸಬಹುದಾದ 200 ಟಿ.ಎಂ.ಸಿ ನೀರಿನ ಪರಮಶಿವಯ್ಯ ವರದಿ ಜಾರಿಗೊಳಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಕೇವಲ 24.01 ಟಿ.ಎಂ.ಸಿ. ನೀರು ಸಿಗಲಿರುವ ಎತ್ತಿನಹೊಳೆ ಯೋಜನೆಗೆ ಮಂಜೂರಾತಿ ನೀಡಿರುವುದು ಬಯಲುಸೀಮೆಯ ಜನತೆಯ ಕಣ್ಣು ಒರೆಸುವ ಪ್ರಯತ್ನವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಖರ್ಚು ಮಾಡಲಿರುವ 8323 ಕೋಟಿ ರು. ವ್ಯರ್ಥವಾಗಲಿದೆ. ಕಡಿಮೆ ಖರ್ಚಿನಲ್ಲಿ ಜಿಲ್ಲೆಯ 2-3 ತಾಲೂಕನ್ನು ಸಂತೈಸಬಹುದಾದ ಮುಗಳೂರು ಕಾಲುವೆ ನೀರು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಒಂದು ದಶಕಗಳಿಂದ ಈಬಗ್ಗೆ ಇತರೆ ಸಮಾನಮನಸ್ಕರ ಜತೆಗೊಡಿ ಮುಗಳೂರು ಕಾಲುವೆ ಯೋಜನೆ ಬಗ್ಗೆ ರಾಜ್ಯ ಸರ್ಕಾರಗಳೂಡನೆ ಪತ್ರ ವ್ಯವಹಾರ ಸೇರಿದಂತೆ ಇತರೆ ರೀತಿಯ ಹೋರಾಟ ನಡೆಸಿದರೂ  ಪ್ರಯೋಜನವಾಗಿಲ್ಲ. ಆದರೆ ಕಳೆದ ಬಿಜೆಪಿ ಸರ್ಕಾರ ತನ್ನ ಕೊನೆಗಳಿಗೆಯ ಸಚಿವ ಸಂಪುಟದಲ್ಲಿ ಈ ಯೋಜನೆಗಾಗಿ 70 ಕೋಟಿ ರು. ಮೀಸಲಿಟ್ಟಿದೆ ಎಂದರು. ಕಳೆದ ದಶಕಗಳಿಂದ ಹೋರಾಟ ನಡೆಸಿ ನೀರಿಗಾಗಿ ಮನವಿ ಮಾಡಿದ್ದರೂ ಸ್ಪಂದಿಸದ ರಾಜ್ಯ ಸರ್ಕಾರಗಳು ಈಗ ಮಾಲೂರು ತಾಲೂಕಿನ ಕೃಷಿ ನಂಬಿರುವ ಜೀವಿಗಳ ಪ್ರಾಣಉಳಿಸಲು ಹರಿಸಬೇಕಾದ ಮುಗಳೂರು ಕಾಲುವೆ ನೀರನ್ನು ಇತ್ತೀಚೆಗೆ ಜಿಲ್ಲೆಗೆ ಬಂದಿರುವ ಬಹುರಾಷ್ಟ್ರೀಯ ಹೋಂಡ ಕಂಪನಿಗೆ ನೀರು ಹರಿಸಲು ನಿರ್ಧರಿಸಿದೆ. ಇದು ರೈತಜನರ ವಿರೋಧಿ ನೀತಿಯಾಗಿದೆ ಎಂದು ದೂರಿದ ಡಾ.ಗೋಪಾಲ್ ಗೌಡ ರವರು ಮೂದಲು ತಾಲೂಕಿನ ಕೆರೆಗಳಿಗೆ ನೀರು ಹರಸಲಿ ನಂತರ ಹೋಂಡ ಕಂಪನಿಗೆ ನೀರು ನೀಡಲಿ.ಇಲ್ಲದಿದ್ದರೆ ತಾಲೂಕು ಜನತೆ ಸಹಕಾರದಿಂದ ಹೋರಾಟ ಅನಿರ್ವಾಯವಾಗಲಿದೆ ಎಂದರು.
ಸಹ ಸಂಚಾಲಕ ಅಶ್ವಥ್ ರೆಡ್ಡಿ ಮಾತನಾಡಿ ಪಶ್ಚಿಮ ಘಟದಿಂದ ಹರಿದು ಬರಲಿರುವ 200 ಟಿ.ಎಂ.ಸಿ.ನೀರಿನ ಡಾ. ಪರಮಶಿವಯ್ಯ ಯೋಜನೆಯ ವಿಳಂಬ ಜಾರಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದ್ದು, ಈಗ ಅವರಲ್ಲೂ ಬಂದಿರುವ ಬದಲಾವಣೆ ಮುಂದಿನ ದಿನದಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬಹುದೆಂಬ ಆಶಯ ಮೂಡುತ್ತಿದೆ ಎಂದರು.
ತಾ.ಪಂ.ಸದಸ್ಯ ಲೋಕೇಶ್ ಮಾತನಾಡಿ ಶಾಶ್ವತ ನೀರಾವರಿ ಹೋರಾಟಕ್ಕೆ ಜಿಲ್ಲೆಯ ಸಾರ್ವಜನಿಕರ-ರೈತರ ಸ್ಪಂದನೆ ನಿರಾಶಾದಾಯಕವಾಗಿದೆ. ಹೋರಾಟದಲ್ಲಿ ಜನತೆ ತೋರುತ್ತಿರುವ ಜಡತ್ವದಿಂದ ರಾಜ್ಯ ಸರ್ಕಾರಗಳು ಎತ್ತಿನಹೊಳೆ ಅಂತಹ ಯೋಜನೆ ಜಾರಿ ತರುವುದಾಗಿ ಹೇಳಿ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಜನಾಲೋಂದನ ರೀತಿಯಲ್ಲಿ ಹೋರಾಟ ನಡೆಯಬೇಕು ಎಂದರು. ಉಪನ್ಯಾಸಕ ಅನಂತ ಮೂರ್ತಿ, ಪತ್ರಕರ್ತ ಸಂಘದ ಅದ್ಯಕ್ಷ ಎಂ.ವಿ. ರವೀಂದ್ರ, ಪ್ರಗತಿ ಪರ ರೈತ ಕೋಡೂರು ಗೋಪಾಲ್ ಗೌಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ.ಗೋಪಾಲ್‌ಗೌಡರ ಹಸಿರೇ-ಉಸಿರು, ಜಲವೇ-ಜೀವ ಎಂಬ ಹೋರಾಟ ದಾಖಲೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಚುಟುಕು ಸಾಹಿತ್ಯ ಪರಿಷತ್‌ನ ಅದ್ಯಕ್ಷ ಕುಂ.ಚಂದ್ರಪ್ಪ, ಜಾನ್ ಅಲ್ಮೇಡಾ, ಭೂಪಾಲ್, ರಾಮೇನಹಳ್ಳಿ ಮುನಿನಾರಾಯಣ, ದ್ಯಾಪಸಂದ್ರ ಲಕ್ಷ್ಮಿನಾರಾಯಣಗೌಡ, ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement