ಐಸಿಡಿಎಸ್ ಯೋಜನೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ಚಿಕ್ಕಬಳ್ಳಾಪುರ ಜು.10
ಐಸಿಡಿಎಸೆ ಯೋಜನೆಯನ್ನು ಸರ್ಕಾರಿ-ಖಾಸಗೀ ಪಾಲುದಾರಿಕೆಯ ಹೆಸರಿನಲ್ಲಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ, ಸುರಿಯುತ್ತಿದ್ದ ಮಳೆಯ ನಡುವೆಯೂ ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟಿಸಿದರು.
ನಗರದ ಪ್ರವಾಸಿ ಮಂದಿರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡು ಜಿ.ಪಂ. ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಮುಂದಿನ ದಿನಗಳಲ್ಲಿ ತೊಂದರೆ ಮಾಡುವ ನೀತಿಯನ್ನು ಜಾರಿಗೆ ತರುವಂತಹುದನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು. ಕೊನೆಗೆ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಕಚೇರಿ ಮುಂಭಾಗ ಧರಣಿ ಕುಳಿತು ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಸಮಾಧಾನಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಿ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹತ್ವಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಹಕಾರಿಯಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಾರ್ಯ ನಿರ್ವಹಣೆಯಲ್ಲಿ ಇದೀಗ ಬದಲಾವಣೆಯನ್ನು ತರಲು ಸರ್ಕಾರ ಮುಂದಾಗಿದ್ದು ಸರ್ಕಾರಿ-ಖಾಸಗೀ ಪಾಲುದಾರಿಕೆಯ ಹೆಸರಿನಲ್ಲಿ ಖಾಸಗೀಕರಣಗೊಳಿಸುವ ಕುತಂತ್ರವನ್ನು ಮಾಡಿದೆ ಎಂದು ಆರೋಪಿಸಿದರು.
ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಂಡರೆ ಉಗ್ರ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಐಸಿಡಿಎಸ್ ಅನ್ನು ಕ್ರಮಬದ್ಧಗೊಳಿಸುವುದರ ಜತೆಗೆ ಇಲಾಖೆಯನ್ನಾಗಿ ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರ ಮತ್ತು ಶಿಶು ವಿಹಾರಗಳನ್ನಾಗಿಸಬೇಕು. ಯಾವುದೇ ರೀತಿಯಲ್ಲೂ ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆಯ ಹೆಸರಿನಲ್ಲಿ ಅಥವಾ ಸರ್ಕಾರಿ ಖಾಸಗೀ ಪಾಲುದಾರಿಕೆಯ ಹೆಸರಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಬಾರದು.
ಅಂಗನವಾಡಿ ನೌಕರರನ್ನು ಮತ್ತು ಸಹಾಯಕರನ್ನು ಸರ್ಕಾರದ 3 ಮತ್ತು 4 ನೇ ದರ್ಜೆಯ ನೌಕರರನ್ನಾಗಿ ಕ್ರಮಬದ್ಧಗೊಳಿಸಿ ಕನಿಷ್ಠ ವೇತನವನ್ನು ನೀಡಬೇಕು. ದೇಶಾದ್ಯಂತ ಅಂಗನವಾಡಿ ನೌಕರರು ಮತ್ತು ಸಹಾಯಕರಿಗೆ ಏಕಪ್ರಕಾರದ ಸೇವಾ ನಿಯಮಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಿ, ಖಜಾಂಚಿ ಲಕ್ಷ್ಮೀನರಸಮ್ಮ, ಅಧ್ಯಕ್ಷರಾದ ಅಶ್ವತ್ಥಮ್ಮ, ನಾರಾಯಣಮ್ಮ, ಜಯಲಕ್ಷ್ಮಮ್ಮ, ಭಾಗ್ಯಮ್ಮ, ವಿಜಯಭಾರತಿ, ಗಾಯಿತ್ರಿ, ಮುಖಂಡರಾದ ಸಿದ್ಧಗಂಗಪ್ಪ, ಬಿ.ಎನ್.ಮುನಿಕೃಷ್ಣಪ್ಪ, ಮಂಜುಳಾ, ಸೌಭಾಗ್ಯಮ್ಮ, ರತ್ನಮ್ಮ, ಆಯಿಷ ಮುಂತಾದವರು ಭಾಗವಹಿಸಿದ್ದರು.