ಕಾಣದ ನಿಧಿ ಶೋಧಕ್ಕೆ ದುಷ್ಕರ್ಮಿಗಳ ಯತ್ನ
ಟೇಕಲ್: ಸಮೀಪದ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿರುವ ಪುರಾತನ ದೇವಾಲಯವಾದ ಕೋಟೆ ಸೋಮೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿದ್ದ ಧ್ವಜಸ್ತಂಭವನ್ನು ಯಾರೋ ದುಷ್ಕರ್ಮಿಗಳು ಒಡೆದು ನಿಧಿಗಾಗಿ ಶೋಧ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ಪಾಳೆಗಾರರ ಆಡಳಿತದ ಅವಧಿಯಲ್ಲಿ ನಿರ್ಮಿಸಿರುವ ತಿಮ್ಮನಾಯಕನ ಕೋಟೆ ಬಹಳ ಪುರಾತನವಾದದ್ದು. ಕಳೆದ 10 ವರ್ಷಗಳಿಂದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ನಿಲ್ಲಿಸಿದ್ದು ಕೋಟೆ ಬಾಗಿಲು ಬೀಗ ಜಡಿಯಲಾಗಿದೆ.
ಕಳೆದ 2 ತಿಂಗಳ ಹಿಂದೆ ಕೋಟೆಯ ಕೆಳಗಡೆ ಇರುವ ಕಲ್ಯಾಣ ಮಂಟಪದ ಬಳಿಯೂ ರಾತ್ರಿ ವೇಳೆ ಯಾರೋ ಮಂಟಪದ ಭಾಗವನ್ನು ಅಗೆದು ನಿಧಿಗಾಗಿ ಶೋಧಿಸಿ ವಾಪಸ್ಸಾಗಿದ್ದರು. ಈಗಲೂ ದುಷ್ಕರ್ಮಿಗಳು ಕೋಟೆಯ ಒಳಗಡೆ ಪ್ರವೇಶಿಸಿ ದೇವಾಲಯದ ಮುಂಭಾಗದಲ್ಲಿದ್ದ 20 ಅಡಿಗೂ ಹೆಚ್ಚಿನ ಧ್ವಜಸ್ತಂಭ ಹಾಗೂ ಅದರ ಅಕ್ಕಪಕ್ಕದಲ್ಲಿದ್ದ ಕಲ್ಲುಗಳನ್ನು ಮೀಟಿ ನಿಧಿಗಾಗಿ ಶೋಧಿಸಿದ್ದು, ನಿಧಿ ಸಿಗದ ಕಾರಣ ಅಲ್ಲಿಂದ ವಾಪಸ್ಸು ಹೋಗಿದ್ದಾರೆ. ಸ್ಥಳಕ್ಕೆ ಇದುವರೆವಿಗೂ ಕಂದಾಯ ಇಲಾಖೆಯವರು ಭೇಟಿ ನೀಡಿಲ್ಲವೆಂದು ಹಾಗೂ ದೇವಾಲಯವನ್ನು ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.