ವಿವಿಧ ಬೇಡಿಕೆಗೆ ಅಂಗನವಾಡಿ ನೌಕರರ ಪ್ರತಿಭಟನೆ
ಕ.ಪ್ರ. ವಾರ್ತೆ ಕೋಲಾರ ಜು.10
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಿಪಿಐಟಿಯು ಪ್ರಾಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ದೇಶದಲ್ಲಿ 1.8 ಕೋಟಿ ಮಹಿಳೆಯರು ಮತ್ತು 8 ಕೋಟಿ ಮಕ್ಕಳನ್ನು ಫಲಾನುಭವಿಗಳಾಗಿ ಹೊಂದಿರುವ ಅತ್ಯಂತ ದೀರ್ಘಕಾಲಿಕ ಮತ್ತು ವಿಸ್ತಾರವಾದ ಬೃಹತ್ ಯೋಜನೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ. ಯಾವುದೇ ಒಂದು ದೇಶದ ಮಹತ್ವಪೂರ್ಣ ಸಂಪನ್ಮೂಲ ಎಂದರೆ ಅದು ಮಾನವ ಸಂಪನ್ಮೂಲ. ಇಂತಹ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿರುವ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ಕೊಡುವ ಬದಲಿಗೆ ಪೌಷ್ಟಿಕತೆಯ ಶಿಕ್ಷಣ ಮತ್ತು ಸಲಹೆಗಳನ್ನು ನೀಡಬೇಕು, ಶೇ. 10 ಐಸಿಡಿಎಸ್ ಪ್ರಾಜೆಕ್ಟ್ಗಳನ್ನು ಕಡ್ಡಾಯವಾಗಿ ಖಾಸಗೀಕರಿಸಬೇಕು, ಶೇ. 10 ಐಸಿಡಿಎಸ್ ಪ್ರಾಜೆಕ್ಟ್ಗಳನ್ನು ಪಂಚಾಯತ್ ರಾಜ್ ಇಲಾಖೆಗೆ ಒಪ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹೆಚ್ಚುವರಿ ಮತ್ತು ಸಂಪರ್ಕ ಕಲ್ಪಿಸುವ ನೌಕರರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಎಲ್ಲಾ ನೌಕರರನ್ನು ಸಹ ಗುತ್ತಿಗೆ ಕಾರ್ಮಿಕರಾಗಿ ಪರಿಗಣಿಸುವ ಕಡೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು ಇದಕ್ಕೆ ತಿದ್ದುಪಡಿ ತರಬೇಕು, ಒಟ್ಟು ಅಂಗನವಾಡಿ ಕೇಂದ್ರಗಳಲ್ಲಿ ಶೇ. 15 ಕೇಂದ್ರಗಳಿಗೆ ಮಾತ್ರ ಸರ್ಕಾರ ಕಟ್ಟಡ ಕಟ್ಟಿಸಲು ಅನುದಾನ ನೀಡುತ್ತದೆ. ಉಳಿದ ಕಟ್ಟಡಗಳಿಗೆ ಸ್ಥಳೀಯವಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಬೇಕೆಂದು ಪ್ರತಿಭಟನಾಕಾರರು ತಿಳಿಸಿದರು.
ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಅಕ್ಷರ ಫೌಂಡೇಷನ್ ಜೊತೆ ಅಂಗನವಾಡಿಗಳಲ್ಲಿ ಪಾಲುದಾರಿಕೆ ನೀಡಲು ಮಾಡಿಕೊಂಡಿರುವ ಒಪ್ಪಂದವನ್ನು ಕೂಡಲೇ ರದ್ದುಪಡಿಸಬೇಕು. ಹಾಸನ ಜಿಲ್ಲೆಯಲ್ಲಿ ಮಕ್ಕಳ ಮನೆಯನ್ನು ಸ್ಥಾಪಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವುದನ್ನು ತಡೆಯಬೇಕು, ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರ ಮತ್ತು ಶಿಶುವಿಹಾರಗಳನ್ನಾಗಿಸಬೇಕು. ಯಾವುದೇ ರೀತಿಯಲ್ಲೂ ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆಯ ಹೆಸರಿನಲ್ಲಿ ಅಥವಾ ಸರ್ಕಾರಿ ಖಾಸಗಿ ಪಾಲುದಾರಿಕೆಯ ಅಂಗನವಾಡಿ ಖಾಸಗೀಕರಣ ಬೇಡವೆಂದು ಒತ್ತಾಯಿಸಿದರು.
ಎಲ್ಲ ಅಂಗನವಾಡಿ ನೌಕರರಿಗೆ ಮತ್ತು ಸಹಾಯಕರಿಗೆ ಕನಿಷ್ಠ ನಿವೃತ್ತಿ ವೇತನ ಮತ್ತು ಗ್ರಾಚ್ಯುಟಿ, ಭವಿಷ್ಯ ನಿಧಿ ಇತ್ಯಾದಿ ಇತರ ಸಾಮಾಜಿಕ ಸುಭದ್ರತೆಗಳು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳಿಲ್ಲದೆ ಸೇವೆಯಿಂದ ತೆಗೆಯಬಾರದು.ದೇಶಾದ್ಯಂತ ಅಂಗನವಾಡಿ ನೌಕರರು ಮತ್ತು ಸಹಾಯಕರಿಗೆ ಏಕಪ್ರಕಾರವಾದ ಸೇವಾ ನಿಯಮಗಳು ಮತ್ತು ಸ್ಪಷ್ಟವಾದ ಕೆಲಸದ ನಿರ್ದೇಶನ, ನೌಕರರು ಮತ್ತು ಸಹಾಯಕರಿಗೆ ಐಸಿಡಿಎಸ್ ಸಂಬಂಧಿತ ಕೆಲಸಗಳಲ್ಲದೆ ಇತರೆ ಕೆಲಸಗಳನ್ನು ಒಪ್ಪಿಸಬಾರದು ಎಂದು ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಜಿ. ಈಶ್ವರಮ್ಮ, ಜಿಲ್ಲಾಧ್ಯಕ್ಷೆ ಎಂ. ಮುನಿರಾಜಮ್ಮ, ಕಾರ್ಯದರ್ಶಿ ಬಿ.ಎಸ್. ನಾಗರತ್ನ ಹಾಗೂ ಖಜಾಂಚಿ ಜಯಮ್ಮ ಪ್ರತಿಭಟನೆ ನೇತೃತ್ವ ವಹಿಸಿದ್ದರು.