ಸರ್ಕಾರಿ ಯೋಜನೆ ಜನರಿಗೆ ತಲುಪಿದಾಗಷ್ಟೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ
ಟೇಕಲ್: ಸರ್ಕಾರದಿಂದ ಬರುವ ಯೋಜನೆ ಹಾಗೂ ಅನುದಾನಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಜನತೆಗೆ ತಲುಪಿಸಿದಾಗ ಮಾತ್ರ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ಹೇಳಿದರು.
ಅವರು ಶಾಸಕರಾದ ಮೇಲೆ ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾ.ಪಂ. ಆವರಣದಲ್ಲಿ ಪ್ರಥಮ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ದೊಡ್ಡ ನಾಯಕನಹಳ್ಳಿ ನಂಜುಂಡಪ್ಪ, ನೂಟವೆ ಮುನಿವೆಂಕಟಪ್ಪನವರು ತಮ್ಮ ಸ್ವಂತ ಜಮೀನುಗಳನ್ನು ಅಧಿಕಾರಿಗಳು ಪಿ ನಂಬರ್ ಆಗಿ ಪರಿವರ್ತಿಸಿದ್ದು ಹಲವಾರು ವರ್ಷಗಳಿಂದ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಣದ ಆಸೆಗಾಗಿ ಕಂಪ್ಯೂಟರಲ್ಲಿ ತಪ್ಪು ಮಾಹಿತಿ ನಮೂದಿಸಿದ್ದಾರೆ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಂಜುನಾಥಗೌಡ ಮಾಲೂರು ತಾಲೂಕಿನಲ್ಲಿ ಅತಿ ಮುಖ್ಯವಾಗಿ ಪಿ ನಂಬರ್ ಬಗ್ಗೆ ಹೆಚ್ಚಿನ ದೂರುಗಳಿದ್ದು ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತದೆ ಎಂದು ಉತ್ತರವಿತ್ತರು. ಇದೇ ಸಂದರ್ಭದಲ್ಲಿ ಕೋಲಾರದ ಎ.ಸಿ. ಕಚೇರಿಯಲ್ಲೂ ಲಂಚತನ ಹೆಚ್ಚಿದ್ದು ಅಧಿಕಾರಿಗಳಿಗೆ ದುಡ್ಡು ಕೊಟ್ಟರೆ ಮಾತ್ರ ಪಿ ನಂಬರ್ ಕೆಲಸವಾಗುತ್ತದೆ ಎಂದು ಮಂಜುನಾಥಗೌಡರೇ ದೂರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ದೂರು ನೀಡಲಾಗಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಅನುರಾಧ ಮಾತನಾಡಿದರು. ಸಭೆಯಲ್ಲಿ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮುಂತಾದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ತಹಶೀಲ್ದಾರ್ ನಂಜಯ್ಯರವರು ಟೇಕಲ್ ಹೋಬಳಿಯಲ್ಲಿ 148 ಫಲಾನುಭವಿಗಳಿಗೆ ವಿವಿಧ ಮಾಸಾಶನ ವಿತರಿಸಲಾಗುತ್ತಿದೆ ಎಂದರು.
ಟೇಕಲ್ ಜಿಪಂ. ಸದಸ್ಯೆ ರತ್ನಮ್ಮನಂಜೇಗೌಡ, ತಾ.ಪಂ. ಅಧ್ಯಕ್ಷ ಚಂದ್ರಪ್ಪ, ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಆನಂದ್, ಹುಳದೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ.ರವಿಂದ್ರ, ಉಪಾಧ್ಯಕ್ಷೆ ಯಲ್ಲಮ್ಮ, ವೈದ್ಯೆ ಡಾ. ಶೃತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್‌ಗೌಡ, ಬಿ.ಜಿ. ಮುನಿಶಾಮಿಗೌಡ, ತಿಮ್ಮೇಗೌಡ, ಪಿ.ಡಿ.ಒ. ಮರಿದೇವರು ಉಪಸ್ಥಿತರಿದ್ದರು.