ಹಣ ಸದ್ಬಳಕೆಗೆ ವಿಶೇಷ ಕಾನೂನು ಜಾರಿಯಾಗಲಿ'
ಚಿಕ್ಕಬಳ್ಳಾಪುರ: ದಲಿತರ ಅಭ್ಯುದಯಕ್ಕಾಗಿ ರಾಜ್ಯದ ಪ್ರತಿ ಬಜೆಟ್‌ನಲ್ಲಿ ಶೇ.25 ರಷ್ಟು ಹಣವನ್ನು ಮೀಸಲಿಡಬೇಕೆನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬುಧವಾರ ಧರಣಿ ಕುಳಿತು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬಜೆಟ್‌ನಲ್ಲಿ ದಲಿತರ ಕಲ್ಯಾಣಕ್ಕಾಗಿ ವಿಶೇಷ ಅನುದಾನವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ದಲಿತರ ಅಭ್ಯುದಯಕ್ಕಾಗಿ ಬಜೆಟ್‌ನಲ್ಲಿ ಶೇ.25 ರಷ್ಟು ಹಣವನ್ನು ಮೀಸಲಿಡಬೇಕೆಂದು ಕೇಂದ್ರ ಯೋಜನಾ ಆಯೋಗದ ನಿರ್ದೇಶನವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿಯೇ ಜಾರಿಗೊಳಿಸಬೇಕು. ಮೀಸಲಿಟ್ಟ ಹಣ ಸಕಾಲದಲ್ಲಿ ಸದ್ಬಳಕೆಯಾಗುವಂತೆ ವಿಶೇಷ ಕಾನೂನನ್ನು ಜಾರಿ ಮಾಡಬೇಕು. ರಾಜ್ಯದಲ್ಲಿ ಏಕರೂಪ ಮತ್ತು ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶೈಕ್ಷಣ ಸಮಾನತೆಯ ವಾತಾವರಣ ನಿರ್ಮಾಣ ಮಾಡಬೇಕು. ಅಲ್ಲದೇ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯದಲ್ಲಿ ಸ್ವಚ್ಛತೆ ಕಾಪಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವುದಲ್ಲದೇ ಸರ್ಕಾರಿ ಮತ್ತು ಖಾಸಗೀ ಕಚೇರಿ, ಸಂಸ್ಥೆಗಳಲ್ಲಿ ಶೌಚಾಲಯಗಳನ್ನು ಶುಚಿಗೊಳಿಸುತ್ತಿರುವ ಸಫಾಯಿ ಕರ್ಮಚಾರಿ ಕಾರ್ಮಿಕರಿಗೆ ತಕ್ಷಣದಿಂದಲೇ ಕನಿಷ್ಠ ಕೂಲಿ ನೀತಿ ಜಾರಿಯಾಗಬೇಕು. ಅವರ ಮಕ್ಕಳಿಗೆ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಉಚಿತವಾಗಿ ವಿದ್ಯಾಭ್ಯಾಸ ನೀಡಲು ಸರ್ಕಾರ ಮುಂದಾಗಬೇಕೆಂದ ಅವರು, ಮಾಜಿ ಮುಖ್ಯಮಂತ್ರಿ ದೇವರಾಜು ಅರಸುರವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯನ್ನು ಪ್ರಸ್ತುತ ಸ್ಥಿತಿಯಲ್ಲಿ ಯಥವತ್ತಾಗಿ ಜಾರಿ ಮಾಡಿ ಭೂ ರಹಿತರಿಗೆ ಭೂಮಿಯನ್ನು ಹಂಚಬೇಕು. ಭಗವಾನ್ ಬುದ್ದ ಜಯಂತಿಯಂದು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯವರ ಜನ್ಮ ದಿನವನ್ನು (ಜೂ.4) ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕದಸಂಸ ಮುಖಂಡರಾದ ಸನಂದ್‌ಕುಮಾರ್, ವೆಂಕಟರಮಣಪ್ಪ, ಮೇಲೂರು ಮಂಜುನಾಥ್, ಆಂಜಿನಪ್ಪ, ಕೇಶವ ಮುಂತಾದವರು ಭಾಗವಹಿಸಿದ್ದರು.