ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

2ನೇ ದಿನವೂ ಉತ್ತಮ ಮಳೆ

Rashmi Kasaragodu
Updated On : 12 Jul 2013, 1:12 am

ಕೋಲಾರ:  ಜಿಲ್ಲೆಗೆ ಮುಂಗಾರು ಮಳೆಯ ಪ್ರವೇಶ ತಡವಾದರೂ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ರೈತಾಪಿ ವರ್ಗದಲ್ಲಿ ಮಂದಹಾಸ ಕಾಣಿಸಲಾರಂಭಿಸಿದೆ. ಗುರುವಾರ ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೆ ಸುರಿದ ಮಳೆಯಿಂದ ನಗರದ ಬಹುತೇಕ ಚರಂಡಿಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿಯಿತು. ನೀರಿನ ಬವಣೆಯಿಂದ ತತ್ತರಿಸಿರುವ ನಗರದ ಜನತೆ ಮಳೆ ನೀರನ್ನು ಬಂದಿಗೆ, ಬಕೆಟ್‌ಗಳಲ್ಲಿ ಶೇಖರಣೆ ಮಾಡಿದ್ದು ಕಂಡು ಬಂದಿತ್ತು. ರಾಜ ಕಾಲುವೆಗಳು ನೆಟ್ಟಗಿದ್ದಲ್ಲಿ ಕೋಲಾರದ ಮೂರು ಕೆರೆಗಳಲ್ಲಿ ಕನಿಷ್ಠ ಕಾಲು ಭಾಗದಷ್ಟು ನೀರು ಶೇಖರಣೆ ಆಗುತ್ತಿತ್ತು ಎಂಬ ಅಭಿಪ್ರಾಯ ಜನತೆಯಲ್ಲಿ ವ್ಯಕ್ತವಾಯಿತು. ಗ್ರಾಮೀಣ ಪ್ರದೇಶದಲ್ಲಿ ರೈತರು ಕಳೆದ ಎರಡು ದಿನಗಳಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಿತ್ತನೆ ಕಾರ್ಯಕ್ಕೆ ನೇಗಿನ ಯೋಗಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.
ಬೆಸ್ಕಾಂ ಸ್ಟೇಷನ್‌ನಲ್ಲಿ ಇಲಿ, ಹೆಗ್ಗಣಗಳ ಕಾಟ
ಕೋಲಾರ:  ಬೆಸ್ಕಾಂ ಸ್ಟೇಷನ್‌ನಲ್ಲಿ ಇಲ್ಲಿ-ಹೆಗ್ಗಣಗಳ ಕಾಟವಂತೆ... ದೊಡ್ಡ ದೊಡ್ಡ ಸ್ವಿಚ್‌ಹೋರ್ಡ್, ಬ್ರೇಕರ್‌ಗಳಲ್ಲಿ ಸೇರಿಕೊಂಡು ಯಾವುದಕ್ಕೂ ಹೆದರದೆ ವೈರುಗಳನ್ನು ಕೀಳುವುದರಿಂದ ಕರೆಂಟ್ ಕಟ್ ಆಗುತ್ತಿದೆಯಂತೆ. ಇದೇನು ವಿಚಿತ್ರ ಅಂತ ಗಾಬರಿ ಕೇಳ್ಬೇಡಿ, ಈ ಮಾಹಿತಿ ನೀಡಿದ್ದೆ ಬೆಸ್ಕಾಂನ ಇಂಜಿನಿಯರೊಬ್ಬರು. ಗುರುವಾರ ಇಡೀ ಕೋಲಾರದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕರೆಂಟ್ ಕಟ್ ಆಗಿತ್ತು. ಗ್ರಾಹಕರು ಲೋಡ್‌ಶೆಡ್ಡಿಂಗ್ ಅಂತ ಭಾವಿಸಿದ್ರು.  ಮಳೆ ಬೇರೆ ಜೋರಾಗಿ ಬರುತ್ತಿದ್ದುದರಿಂದ ಬೇಕಾಗಿಯೇ ಕರೆಂಟ್ ತೆಗೆದಿರಬಹುದೆಂದು ಕೆಲವರು ತಿಳಿದುಕೊಂಡಿದ್ದರು. ಗ್ರಾಹಕರೊಬ್ಬರು ಬೆಸ್ಕಾಂ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ ಸ್ಟೇಷನ್‌ನಲ್ಲಿ ಇಲಿ-ಹೆಗ್ಗಣಗಳ ಹಾವಳಿಯಿಂದ ಕರೆಂಟ್ ತೆಗೆದಿರುವುದಾಗಿ ಗೊತ್ತಾಯಿತು. ಸ್ಟೇಷನ್‌ನಲ್ಲಿ ವೈರುಗಳು ಸುಟ್ಟು ಹೋಗಿ ಸ್ವಿಚ್‌ಬೋರ್ಡ್‌ಗಳಿಗೆ ಹಾನಿ ಆಗಿದ್ದರಿಂದ ದುರಸ್ತಿಗಾಗಿ ವಿದ್ಯುತ್ ಕಟ್ ಮಾಡಲಾಗಿತ್ತು ಎಂದು ಅಧಿಕಾರಿ ಸ್ಪಷ್ಟನೆ ನೀಡಿದರು. ಕಳೆದ ವರ್ಷವೂ ಇದೇ ರೀತಿ ಸ್ಟೇಷನ್‌ನಲ್ಲಿ ಇಲಿ, ಹೆಗ್ಗಣ ಹಾಗೂ ಹಾವುಗಳು ಸೇರಿಕೊಂಡಿದ್ದರಿಂದ ಅವುಗಳನ್ನು ಓಡಿಸಲು ಕರೆಂಟ್ ಕಟ್ ಮಾಡಲಾಗಿತ್ತು. ಕರೆಂಟ್ ಕಂಡ್ರೆ ಭಯಪಡುವ ಜನರಿದ್ದಾರೆ, ಅದ್ರೆ ಜಂತುಗಳಿಗೇಕಿಲ್ಲ ಭಯ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ. ಇಲಿ-ಹೆಗ್ಗಣ ಸ್ಟೇಷನ್‌ಗೆ ನುಸಳದಂತೆ ಅಧಿಕಾರಿಗಳು ಎಚ್ಚರವಹಿಸದಿದ್ದರೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪ್ರಾಣಕ್ಕೆ ಅಪಾಯ ಉಂಟಾಗುವ ಜತೆಗೆ ದುರಸ್ತಿಗಾಗಿ ಸಾವಿರಾರು ರುಪಾಯಿ ವ್ಯಯವಾಗುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಬಹುದು.
ಶಾಸಕರಿಂದ ಉಚಿತ
ಕಂಪ್ಯೂಟರ್ ವಿತರಣೆ
ಗುಡಿಬಂಡೆ: ತಾಲೂಕಿನ ಬಡಜನರಿಗೆ ಶೀಘ್ರವಾಗಿ ಪಡಿತರ ಚೀಟಿ ಪಡೆಯಲು ಅನುಕೂಲವಾಗಲು 7 ಗ್ರಾ.ಪಂಗಳಿಗೆ ತಲಾ 1 ರಂತೆ 7 ಕಂಪ್ಯೂಟರ್‌ಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉಚಿತವಾಗಿ ವಿತರಿಸಿದರು. ಬೀಚಗಾನಹಳ್ಳಿ ಗ್ರಾಪಂ ಕಚೇರಿಯ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡಜನರ ದೃಷ್ಟಿಯಲ್ಲಿಟ್ಟುಕೊಂಡು 1ರು.ಗೆ 1 ಕೆಜಿಯಂತೆ ಅಕ್ಕಿಯನ್ನು ವಿತರಿಸುತ್ತಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲ ಬಡಜನರು ಬಿಪಿಎಲ್ ಕಾರ್ಡ್ ಪಡೆಯಲು ಸರ್ವರ್ ತೊಂದರೆಯಿಂದ ಕಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಉಚಿತ ಕಂಪ್ಯೂಟರ್ ನೀಡುತ್ತಿರುವುದಾಗಿ ತಿಳಿಸಿದರು. ಶಾಸಕನಾದ ನಂತರ ನನ್ನ ಕ್ಷೇತ್ರ ಸಂಚಾರ ಸಮಯದಲ್ಲಿ ನನಗೆ ಕಂಡು ಬಂದ ಸಮಸ್ಯೆಯೆಂದರೆ ಕುಡಿಯುವ ನೀರಿನ ಸಮಸ್ಯೆ. ಕ್ಷೇತ್ರದ ಶೇ.80 ರಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಆದಷ್ಟೂ ಬೇಗ ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲಾಗುವುದೆದರು. ಈ ವೇಳೆ ಜಿ.ಪಂ. ಸದಸ್ಯ ಅಶ್ವತ್ಥಪ್ಪ, ಬೀಚಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಕೃಷ್ಣಮ್ಮ, ಜಿ.ಪಂ. ಮಾಜಿ ಉಪಾಧ್ಯಕ್ಷ ಚೆಂಡೂರು ವೆಂಕಟೇಶ್, ಗ್ರಾ.ಪಂ. ಸದಸ್ಯರುಗಳು, ಕಾರ್ಯದರ್ಶಿಗಳು, ಇಲಾಖಾ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement