ಅಂಧೆ ಗರ್ಭಿಣಿ ಬಾವಿಗೆ ತಳ್ಳಿದ ಆರೋಪಿ ಬಂಧನ
ಬಾಗೇಪಲ್ಲಿ: ನಯವಾದ ಮಾತಿನ ಮೂಲಕ ಮದುವೆಯಾಗುವ ನಾಟಕವಾಡಿ ಅಂಧ ಮಹಿಳೆಯನ್ನು ಗರ್ಭಿಣಿಯನ್ನಾಗಿಸಿ, ಕೊನೆಗೆ ಮಾನವೀಯತೆ ಮರೆತು ಆಕೆಯನ್ನು ನೀರಿಲ್ಲದ ಬಾವಿಗೆ ತಳ್ಳಿ ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಪುಟ್ಟಪರ್ತಿ ಗ್ರಾಮದ ಆದೆಪ್ಪ (48) ಬಂಧಿತ ಆರೋಪಿ. ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ಪ್ಲಾಜಾ ಬಳಿ ಆಂಧ್ರಪ್ರದೇಶಕ್ಕೆ ಪರಾರಿಯಾಗುವ ಯತ್ನದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಪೊಲೀಸರು ಆಗಮಿಸಿ, ಆದೆಪ್ಪನನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ತಾಲೂಕಿನ ಪುಟ್ಟಪರ್ತಿ ಗ್ರಾಮದ ಅಂಧ ಮಹಿಳೆ ಶಿವಮ್ಮ ಕಳೆದ ಶನಿವಾರ ಅಸ್ವಸ್ತಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯನ್ನು ವಿಚಾರಿಸಿದಾಗ ತಮ್ಮ ತಂದೆಗೆ ಚಿರಪರಿಚಿತನಾಗಿದ್ದ ಗ್ರಾಮದ ಆದೆಪ್ಪ ಎಂಬವನು ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಆಗಾಗ ಬರುತ್ತಿದ್ದ. ತನ್ನ ಜತೆಗೆ ಅನುಕಂಪದ ಮಾತುಗಳನ್ನಾಡುತ್ತಿದ್ದ. ಶಿವಮ್ಮನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಗರ್ಭಿಣಿಯನ್ನಾಗಿಸಿದ್ದ.
ಗರ್ಭಿಣಿಯಾಗಿದ್ದ ವಿಷಯ ಶಿವಮ್ಮ ಅವರು ಆದೆಪ್ಪನ ಗಮನಕ್ಕೆ ತಂದು ಮದುವೆಯಾಗುವಂತೆ ಒತ್ತಾಯಿಸಿದರು. ಆಗ ಈ ಬಗ್ಗೆ ಯಾರಿಗೂ ಹೇಳಬೇಡ, ನಿನ್ನನ್ನು ಮದುವೆಯಾಗುತ್ತೇನೆ ಎಂದು ಕರೆದುಕೊಂಡು ಹೋದ. ಬಳಿಕ ಗ್ರಾಮದ ನೀರಿಲ್ಲದ ಬಾವಿಗೆ ಶಿವಮ್ಮ ಅವರನ್ನು ತಳ್ಳಿ ಸಾಯಿಸಲು ಯತ್ನಿಸಿದ.
ಅಸಹಾಯಕಳಾಗಿ ನಾನು ಶಿವಮ್ಮ ಎರಡು ದಿನಗಳ ಕಾಲ ಬಾವಿಯೊಳಗೆ ಕಾಲ ಕಳೆದರು. ಕೊನೆಗೆ ಕುರಿ ಕಾಯುವವರು ಬಾವಿಯ ಸಮೀಪದಲ್ಲಿ ಹೋಗುತ್ತಿದ್ದನ್ನು ಕೇಳಿಸಿಕೊಂಡು ಜೋರಾಗಿ ಶಿವಮ್ಮ ಕೂಗು ಹಾಕಿದ್ದರು. ಆಗ ಮಹಿಳೆ ಕೂಗಿಗೆ ಕಿವಿಯಾದ ಕುರಿಗಾಹಿಗಳು ಶಿವಮ್ಮ ಅವರನ್ನು ರಕ್ಷಿಸಿದರು. ಈ ಸಂಬಂಧ ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಆದೆಪ್ಪನನ್ನು ಬಂಧಿಸಿದ್ದಾರೆ.
ಬೆಂಗಳೂರಿಗೆ ಅಂಧ ಮಹಿಳೆ: ಈ ಮಧ್ಯೆ 6 ತಿಂಗಳ ಗರ್ಭಿಣಿಯಾಗಿದ್ದ ಶಿವಮ್ಮ ಅವರನ್ನು ಬಾವಿಗೆ ತಳ್ಳಲ್ಪಟ್ಟಿರುವುದರಿಂದ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಶಿವಮ್ಮಗೆ ಬೆನ್ನಿನ ಮೂಳೆ ಮುರಿದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ತಳ್ಳಿದ್ದು ನಾನಲ್ಲ... ಎರಡು ಮಕ್ಕಳ ತಂದೆಯಾಗಿರುವ ಆದೆಪ್ಪನ ಹೆಂಡತಿ ಜೀವಂತವಾಗಿದ್ದರೂ ಸಹ ಶಿವಮ್ಮ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿ ಗರ್ಭಿಣಿಯನ್ನಾಗಿಸಿದ್ದಾನೆ. ಈ ಬಗ್ಗೆ ವಿಚಾರಿಸಿದಾಗ ಶಿವಮ್ಮ ಅವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದು ನಿಜ. ಆದರೆ, ಆಕೆಯನ್ನು ಬಾವಿಗೆ ತಳ್ಳಿದವನು ನಾನಲ್ಲ ಎಂಬ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.