ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉದ್ಧಾರದ ಹೆಸರಲ್ಲಿ ಟೋಪಿ.. ಎಚ್ಚರವಿರಿ..

Rashmi Kasaragodu
Updated On : 12 Jul 2013, 12:18 pm

ಕ.ಪ್ರ.ವಾರ್ತೆ   ಕೋಲಾರ   ಜು. 11
ಆಟೋ ಚಾಲಕರು ಮತ್ತು ಬೀಡಿ ಕಾರ್ಮಿಕರನ್ನು ಉದ್ಧಾರ ಮಾಡುವುದಾಗಿ ಹೇಳಿ ಕಡೆಗೆ ತಲೆಗೆ ಟೋಪಿ ಹಾಕುವ ವ್ಯಕ್ತಿಗಳಿದ್ದು ಇಂಥವರ ಬಗ್ಗೆ ಎಚ್ಚರವಹಿಸಬೇಕೆಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಸಲಹೆ ನೀಡಿದರು.
ನಗರದ ಕೋರ್ಟ್ ವೃತ್ತದಲ್ಲಿ ಗುರುವಾರ ಆಟೋ ಚಾಲಕರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ನಿಮ್ಮನ್ನೆಲ್ಲಾ ಬಳಸಿಕೊಂಡು ನಾಯಕನಾದ ಅಸಾಮಿ ನಂಬಿಕೆ ಅನರ್ಹರಾಗಿದ್ದು ಮತ್ತೆ ಅಂತಹ ವ್ಯಕ್ತಿಯನ್ನು ನಂಬಬೇಡಿ ಎಂದು ಕಿವಿಮಾತು ಹೇಳಿದರಲ್ಲದೆ, ನಿಮ್ಮ ಹೆಸರಿನಲ್ಲಿ ಕೆಲಸ ಮಾಡುವವರು ನಮಗಾಗಿ ಏನು ಮಾಡುತ್ತಿದ್ದಾರೆ ಎಂಬುದನ್ನು ಹತ್ತು ಸಾರಿ ಪರಿಶೀಲಿಸಿ ಎಂದರು.
ಈ ಹಿಂದೆ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದವರು ಫಲಾನುಭವಿಗಳಿಗೆ ಜೆರಾಕ್ಸ್ ಹಕ್ಕುಪತ್ರ ನೀಡಿ ಅಸಲಿ ಹಕ್ಕುಪತ್ರ ನೀಡಲು ಫಲಾನುಭವಿಗಳಿಂದ 10 ಸಾವಿರ ರು. ಲಂಚ ತೆಗೆದುಕೊಳ್ಳುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಈ ವ್ಯಕ್ತಿಯ ಬಗ್ಗೆ ಪೊಲೀಸ್ ತನಿಖೆ ನಡೆಸುವುದಾಗಿ ಆಟೋ ಯೂನಿಯನ್ ಮುಖಂಡ ಸುರೇಶ್‌ಕುಮಾರ್ ಹೆಸರು ಹೇಳದೆ ಎಚ್ಚರಿಸಿದರು.
ಕಚೇರಿಯಲ್ಲೇ ಕೆಲಸದ ಭರವಸೆ: ಮುಂದಿನ ದಿನಗಳಲ್ಲಿ ವಾರದಲ್ಲಿ ಎರಡು ದಿನ ಆರ್.ಟಿ.ಓ ಕಚೇರಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸುವುದಲ್ಲದೆ, ಆಟೋ ಚಾಲಕರ ಕೆಲಸ ಕಾರ್ಯಗಳನ್ನು ತಾವು ಕಚೇರಿಯಲ್ಲೇ ಕುಳಿತು ಅಧಿಕಾರಿಗಳಿಂದ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಆಟೋ ಚಾಲಕರ ಸಂಘದ ವಿಶ್ರಾಂತ ಗೃಹ ನಿರ್ಮಾಣಕ್ಕೆ 5 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು. ನಗರಕ್ಕೆ ಸಂಪರ್ಕ ಕಲ್ಪಿಸುವ ಹೊರಗಿನ ಎಲ್ಲಾ ರಸ್ತೆಗಳನ್ನು ಜೋಡಿ ರಸ್ತೆಗಳನ್ನಾಗಿ ಮಾರ್ಪಡಿಸುವುದಾಗಿ ಇದೇ ಸಂದರ್ಭದಲ್ಲಿ ವರ್ತೂರು ಪ್ರಕಾಶ್ ಪ್ರಕಟಿಸಿದರು.
ನಗರದಲ್ಲಿ ಈಗಾಗಲೇ ಅತ್ಯುತ್ತಮ ರಸ್ತೆ ವ್ಯವಸ್ಥೆ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ರಹಮತ್ ನಗರದಿಂದ ರಾಷ್ಟ್ರೀಯ ಹೆದ್ದಾರಿ 4 ರ ಎಪಿಎಂಸಿ ಮಾರುಕಟ್ಟೆವರೆಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದ್ದು, ಇದನ್ನು ಶೀಘ್ರವೇ ಕಾರ್ಯಗತಗೊಳಿಸಿ ಮಾರುಕಟ್ಟೆಗೆ ತೆರಳುವ ವಾಹನಗಳನ್ನು ಈ ಮಾರ್ಗದಲ್ಲಿ ಸಂಚರಿಸುವಂತೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ದಾಖಲೆ ಪತ್ರ ಜೊತೆಯಿರಲಿ: ಕೋಲಾರದಲ್ಲಿ ಉತ್ತಮ ರಸ್ತೆ ಕಾಮಗಾರಿ ನಡೆದಿರುವುದರಿಂದ ಆಟೋ ಚಾಲಕರಿಗೆ ತಿಂಗಳಿಗೆ ಸುಮಾರು 2 ರಿಂದ 3 ಸಾವಿರ ರು. ಗಳಷ್ಟು ಉಳಿತಾಯವಾಗುತ್ತಿದೆ ಎಂದರಲ್ಲದೆ ಆಟೋ ಚಾಲಕರು ಟ್ಯಾಕ್ಸ್, ಇನ್ಸ್ಯೂರೆನ್ಸ್, ಸಮವಸ್ತ್ರ, ಪರವಾನಗಿಯನ್ನು ಆಟೋ ಚಾಲನೆ ಸಂದರ್ಭದಲ್ಲಿ ತಮ್ಮ ಬಳಿಯಿಟ್ಟುಕೊಂಡರೆ ಪೊಲೀಸರಿಗೆ ಭಯಪಡಬೇಕಾದ ಅವಶ್ಯಕತೆಯಿರುವುದಿಲ್ಲ ಎಂದು ಸಲಹೆ ಮಾಡಿದರು.
ನಗರಸಭೆ ಸದಸ್ಯ ಗಾಂಧಿ ನಾರಾಯಣಸ್ವಾಮಿ ಮಾತನಾಡಿ, ಶಾಸಕರು ನೀಡುತ್ತಿರುವ ಸಹಾಯ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗುತ್ತಿರುವುದರಿಂದ ಶಾಶ್ವತ ಕಾಮಗಾರಿಗಳನ್ನು ಮಾಡುವಂತೆ ಮನವಿ ಮಾಡಿದರು.
ಆಟೋ ಚಾಲಕರ ಸಂಘದ ರಾಜ್ಯ ಮುಖಂಡ ರಾಘವೇಂದ್ರ ಮಾತನಾಡಿ, ಆಟೋ ಚಾಲಕರು 1700ಕೋಟಿ ರು. ಗಳಷ್ಟು ತೆರಿಗೆ ಪಾವತಿಸುತ್ತಿದ್ದು, ಇದರಲ್ಲಿ 1 ಸಾವಿರ ಕೋಟಿ ರು. ಗಳನ್ನು ಆಟೋ ಚಾಲಕರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಆಟೋ ಚಾಲಕರಿಗೆ ಪಿಯುಸಿ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದು, ರಾಜಕಾರಣಿಗಳಿಗಿಲ್ಲದ ವಿದ್ಯಾರ್ಹತೆ ಆಟೋ ಚಾಲಕರಿಗೆ ಏಕೆ ಎಂದು ಪ್ರಶ್ನಿಸಿದರಲ್ಲದೆ ಈ ನಿಮಯವನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದರು.
ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ಮಾತನಾಡಿ, ನಗರದಲ್ಲಿನ ಸುಗಮ ಸಂಚಾರ ವ್ಯವಸ್ಥೆಗೆ ಪ್ರತಿಯೊಬ್ಬರು ಸಹಕರಿಸಬೇಕು. ಈ ವಿಚಾರದಲ್ಲಿ ಶಾಸಕರ ಸಹಕಾರ ಹೆಚ್ಚಿದೆ ಎಂದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ಬೆಗ್ಲಿ ಪ್ರಕಾಶ್, ರಘುರಾಂ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ಕಾರ್ಮಿಕರ ನಿರೀಕ್ಷಕ ಜಯಶಂಕರ್, ಆಟೋ ಚಾಲಕರ ಮುಖಂಡರಾದ ರಾಜಣ್ಣ, ಕೆ.ವಿ. ಮಂಜುನಾಥ್,  ಕಾರ್ಮಿಕ ಮುಖಂಡ ಯಲ್ಲಪ್ಪ, ಡಾ. ಶಿವಣ್ಣ, ತಾಲೂಕು ಆಟೋ ಯೂನಿಯನ್ ಮುಖಂಡ ಭಗತ್ ನಾರಾಯಣಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement