ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಂಪಿ ಚುನಾವಣೆ ಬಳಿಕ ಅನ್ನಭಾಗ್ಯ ಸ್ಥಗಿತ ಸಂಭವ

Rashmi Kasaragodu
Updated On : 12 Jul 2013, 12:17 pm

ಕ.ಪ್ರ. ವಾರ್ತೆ, ಕೋಲಾರ, ಜು.11
ಸಮಾಜವಾದ ಹಾಗೂ ಜನಪರ ಹೋರಾಟಗಳ ಮೂಲಕ ರಾಜಕೀಯ ರಂಗದಲ್ಲಿ ಅತ್ಯಂತ ಎತ್ತರಕ್ಕೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ. ಆದರೆ, ಕೇಂದ್ರದಲ್ಲಿನ ಜನವಿರೋಧಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಲೋಕಸಭಾ ಚುನಾವಣೆ ನಂತರ ಕಡಿವಾಣ ಹಾಕಬಹುದೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಸಿ. ಗೌರಮ್ಮ ಅನುಮಾನ ವ್ಯಕ್ತಪಡಿಸಿದ ರು.
ಅವರು ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೋಲಾರ ತಾಲೂಕು ಮಟ್ಟದ 3ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಗೆಲ್ಲಬೇಕೆಂಬ ಉದ್ದೇಶದಿಂದ ಅಕ್ಕಿ ಯೋಜನೆ ಜಾರಿಗೆ ತರಲಾಗಿದ್ದು, ಚುನಾವಣೆ ಮುಗಿದ ಬಳಿಕ ಬಡವರ ಎಲ್ಲ ಯೋಜನೆಗಳ ಸಬ್ಸಿಡಿಗೆ ತತ್ತರಿ ಬೀಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದರು.
ಬಡವರಿಗಾಗಿ ರೂಪಿಸುವ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲದ ರೀತಿಯಲ್ಲಿ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕು, ಬದುಕಿಗಾಗಿ ಚಳವಳಿ ಮುಂದುವರೆಯದಿದ್ದರೆ ಬಡತನ ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಮಹಿಳೆಯರಿಗೆ ಮಾತ್ರ ರಾಜಕಾರಣಿಗಳು, ಶ್ರೀಮಂತರು ಬದುಕಲು ಮುಕ್ತವಾದ ಅವಕಾಶ ನೀಡದೆ ನಾಲ್ಕು ಗೋಡೆಗಳ ಮಧ್ಯೆ ಕಟ್ಟಿ ಹಾಕಿದ್ದಾರೆಂದು ಆರೋಪಿಸಿದ ಗೌರಮ್ಮ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮಹಿಳೆಯ ಅಭಿವೃದ್ಧಿ, ರಕ್ಷಣೆಗಾಗಿ ಸೂಕ್ತ ಕಾನೂನು ಜಾರಿ ಸಾಧ್ಯವಾಗಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಚುನಾವಣೆಗಳ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣ, ರಾಜಕೀಯ ಮೀಸಲಾತಿ, ಉದ್ಯೋಗ ಸೇರಿದಂತೆ ಇನ್ನಿತರ ಭರವಸೆ ನೀಡುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿವೆ, ರಾಜಕೀಯದಲ್ಲಿ ಶೇ. 33 ಮೀಸಲಾತಿ ಜಾರಿಗೆ ಈ ಎರಡೂ ಪಕ್ಷಗಳು ವಿರೋಧವಾಗಿವೆ ಎಂದು ದೂರಿದರು.
ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರಗಳ ವಿರುದ್ಧ ಜನವಾದಿ ಮಹಿಳಾ ಸಂಘಟನೆಯೊಂದಿಗೆ ಕೈಜೋಡಿಸಿ ಹೋರಾಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಮುಂದಾಗಿ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಕರೆ ನೀಡಿದರು.
ರಾಜ್ಯ ಸರ್ಕಾರ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕಾದರೆ ಪ್ರಬಲ ಹೋರಾಟ ಅಗತ್ಯವಿದ್ದು ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ನ್ಯಾಯ ಪಡೆಯಬೇಕೆಂದರು.
ಕೋಲಾರ ಸರ್ಕಾರಿ ಕಾನೂನು ಕಾಲೇಜಿನ ಉಪನ್ಯಾಸಕಿ ಡಾ. ಪ್ರಸನ್ನ ಕುಮಾರಿ ಮಾತನಾಡಿ, ಮಹಿಳೆಯರು ಶಿಕ್ಷಣದ ಮೂಲಕ ಅರಿವು ಹಾಗೂ ಜ್ಞಾನ ಸಂಪಾದಿಸಿ ಹಕ್ಕುಗಳಿಗೆ ಪ್ರತಿಪಾದಿಸಬೇಕೆಂದರು. ಉದ್ಯೋಗ ಖಾತ್ರಿ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಲಾಭವಿದೆ, ಆದರೆ ಯೋಜನೆಯ ಅನುಷ್ಠಾನದಲ್ಲಿ ಲೋಪವಿರುವುದರಿಂದ ಬಡವರಿಗೆ ನ್ಯಾಯ ಸಿಗುತ್ತಿಲ್ಲ, ಪ್ರತಿಯೊಬ್ಬ ಮಹಿಳೆ ತಮ್ಮ ವ್ಯಾಪ್ತಿಯ ಗ್ರಾಮ ಸಭೆಗಳಿಗೆ ಕಡ್ಡಾಯವಾಗಿ ಭಾಗವಹಿಸಿ ಹಕ್ಕುಗಳನ್ನು ಮಂಡಿಸಬೇಕೆಂದರು.
ಮಹಿಳೆಯರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಬಾಲ್ಯ ವಿವಾಹ, ಅನಿಷ್ಠ ಪದ್ಧತಿಗಳ ವಿರುದ್ಧ ದೈರ್ಯವಾಗಿ ದನಿ ಎತ್ತಿ, ಇಂದು ಪುಟ್ಟ ಬಾಲಕಿಯರಿಂದ ಹಿಡಿದು ವಯೋವೃದ್ಧರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರ ನಡೆಯುತ್ತಿರುವುದಕ್ಕೆ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ಕಾರಣವಾಗಿರುವುದರಿಂದ ಮಹಿಳೆಯರು ಜಾಗೃತರಾಗಬೇಕು, ನಶಿಸುತ್ತಿರುವ ಮೌಲ್ಯ ಉಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕೆಂದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾ ಕಾರ್ಯದರ್ಶಿ ವಿ. ಗೀತಾ ಮಾತನಾಡಿ, ಮಹಿಳೆಯರ ಪರವಾಗಿ ಹೋರಾಡುತ್ತಿರುವ ಜನವಾದಿ ಮಹಿಳಾ ಸಂಘಟನೆಯನ್ನು ಬಲಪಡಿಸಲು ಸಹಕಾರ ನೀಡುವಂತೆ ಕೋರಿದರು. ಸಂಘಟನೆಯ ಮುಖಂಡರಾದ ಶಾಂತಿ, ಸುಶೀಲ ಇದ್ದರು. ತಾಲೂಕು ಘಟಕದ ಅಧ್ಯಕ್ಷೆ ಅಂಜನಮ್ಮ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement