ತರಕಾರಿ ಮಾರುಕಟ್ಟೆ ನಿರಾಶ್ರಿತರಿಂದ ಅನಿರ್ದಿಷ್ಟ ಪ್ರತಿಭಟನೆ ಮುಂದುವರಿಕೆ
ಗೌರಿಬಿದನೂರು: ಸುಮಾರು 1 ಕೋಟಿ ವೆಚ್ಚದೊಂದಿಗೆ ಪುರಸಭೆ ಕಾರ್ಯಾಲಯದ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಹಳಬರಿಗೆ ನೀಡಬೇಕೆಂಬ ನಿಯಮವಿದೆ. ಆದರೆ, ಒಬ್ಬನೇ ವ್ಯಕ್ತಿಗೆ 2-3 ಅಂಗಡಿಗಳನ್ನು ನೀಡಲಾಗಿದೆ. ತಕ್ಷಣವೇ ಹಳಬರಿಗೂ ಅಂಗಡಿಗಳನ್ನು ನೀಡಬೇಕೆಂದು ಆಗ್ರಹಿಸಿ ತರಕಾರಿ ಮಾರಾಟಗಾರರು ಹೊಸ ಮಾರುಕಟ್ಟೆಯ ಮುಂದೆ ತಮ್ಮ ಬೇಡಿಕೆಗಳಿಗಾಗಿ ಅನಿರ್ದಿಷ್ಟ ಪ್ರತಿಭಟನೆ ಮುಂದುವರಿಸಿದ್ದಾರೆ.
ಸಂಘಟನೆಯೊಂದಿಗೆ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಸಹಾ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 64 ಅಂಗಡಿ ಮಳಿಗೆಗಳಲ್ಲಿ 50 ಮಂದಿಗೆ ಅಂಗಡಿ ಮಳಿಗೆಗಳನ್ನು ನೀಡಲಾಗಿದೆ. ಉಳಿದ 14 ಮಂದಿಗೆ ಅಂಗಡಿಗಳನ್ನು ನೀಡದೇ ಅವ್ಯವಹಾರಕ್ಕೆ ಕೈ ಹಾಕಿ ಪುರಸಭೆ ಅಧಿಕಾರಿಗಳು ಹೊಸಬರಿಗೆ ಅಂಗಡಿಗಳನ್ನು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು. ಪ್ರತಿಭಟನೆಯಲ್ಲಿ ನಾಯಕರಾದ ಅಂಜಿನಮೂರ್ತಿ, ಉದಯಕುಮಾರ್, ಸುದರ್ಶನ್, ಲಕ್ಷ್ಮಮ್ಮ ಮಾತನಾಡಿದರು.