ತಾಲೂಕು ಕಚೇರಿಯಲ್ಲಿ ಲಂಚ ಹಾವಳಿ: ಎಚ್ಚರಿಕೆ
ಕ.ಪ್ರ.ವಾರ್ತೆ ಶ್ರೀನಿವಾಸಪುರ ಜು. 11
ಇಲ್ಲಿನ ತಾಲೂಕು ಕಚೇರಿಯಲ್ಲಿ ಬಡವರ ಹಾಗೂ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗಾಗಿ ನೀಡಲಾಗಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಲಂಚ ತಾಂಡವವಾಡುತ್ತಿದೆ. ಅಲ್ಲದೆ, ಗ್ರಾಮ ಲೆಕ್ಕಾಧಿಕಾರಿಯ ರಾಜಸ್ವ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಸೀಲ್ದಾರರ ಸಹಿ ಇಲ್ಲದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಈ ಅವ್ಯವಸ್ಥೆ ಯಾರೂ ಚಕಾರವೆತ್ತುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಬಡವರ ಮಕ್ಕಳನ್ನು ಶಾಲೆ ಸೇರಿಸಬೇಕೆಂದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಗತ್ಯವಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಕ್ಕೂ ಅವಶ್ಯವಿದೆ. ಇವನ್ನು ಸರ್ಕಾರದಿಂದ ಪಡೆಯಲು ಲಂಚ ನೀಡದೇ ವಿಧಿ ಇಲ್ಲ ಎಂಬಂತಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡುವ ಗಣಕ ಯಂತ್ರ ವಿಭಾಗದಲ್ಲಿ ಕೆಲಸ ನಿರ್ವಹಿಸುವವರು ಬಡಪಾಯಿಗಳ ಅರ್ಜಿಗಳನ್ನು ಪಕ್ಕಕ್ಕಿಇಟ್ಟು ಶ್ರೀಮಂತರು ನೀಡುವ 200- 300 ಲಂಚದಾಸೆಗೆ ತುರ್ತಾಗಿ ಗಂಟೆಯೊಳಗಡೆ ಕೆಲಸ ಮುಗಿಸುತ್ತಿದ್ದಾರೆ. ಇಲ್ಲಿ ಬಡವರಿಗೆ ಮಾತ್ರ ಘೋರ ಅನ್ಯಾಯವಾಗುತ್ತಿದೆ ಎಂದು ನಾಗರಿಕರ ಆರೋಪ.
ಇಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಕ್ಕೆ ಕಡಿವಾಣ ಹಾಕದಿದ್ದಲ್ಲಿ ತಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.