ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್ ಪಾಸ್‌ಗೆ ಸಹಿ ಹಾಕದ ಪ್ರಿನ್ಸಿಪಾಲ್

Rashmi Kasaragodu
Updated On : 12 Jul 2013, 1:10 am

ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಜು.11
ಆರ್ಥಿಕ ಸಮಸ್ಯೆ ನಡುವೆಯೂ ತಮ್ಮ ತಮ್ಮ ಊರುಗಳಿಂದ ಪ್ರತಿದಿನ ಬಸ್ಸಿನಲ್ಲಿ ಹಣವನ್ನು ತೆತ್ತು ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳ ಬಸ್ ಪಾಸ್ ಅರ್ಜಿಗಳಿಗೆ ಸಹಿ ಹಾಕಲು ಸತಾಯಿಸುತ್ತಿದ್ದ ಧೋರಣೆ ಖಂಡಿಸಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.
ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಬುದ್ಧಿವಾದ ಹೇಳಬೇಕು. ಆದರೆ, ತಮ್ಮ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುವಂತೆ ಮಾಡುತ್ತಿದ್ದ ಪ್ರಾಂಶುಪಾಲರಿಗೆ ಪ್ರತಿಭಟನೆ ಮೂಲಕ ವಿದ್ಯಾರ್ಥಿಗಳೇ ಪಾಠ ಹೇಳಿಕೊಟ್ಟರು.
ಪರ್ಯಾಯ ವ್ಯವಸ್ಥೆ ಕೈಗೊಳ್ಳದೇ, ಬಸ್ ಪಾಸ್ ಅರ್ಜಿಗಳಿಗೆ ಸಹಿ ಹಾಕದೇ ಪದೇ ಪದೇ ವಿದ್ಯಾರ್ಥಿಗಳನ್ನು ಸತಾಯಿಸುತ್ತಿರುವುದು ಸರಿಯೇ? ಪ್ರತಿದಿನ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಬೇಡವೇ ಎಂದು ಪ್ರಾಂಶುಪಾಲರಿಗೆ ಪ್ರಶ್ನೆಗಳ ಸುರಿಮಳೆಗೈದರು. ಕೊನೆಗೆ ವಿದ್ಯಾರ್ಥಿಗಳ ಮಾತಿಗೆ ಉತ್ತರ ಹೇಳಲಾಗದೇ ಪ್ರಾಂಶುಪಾಲರೇ ನೀವೇನಾದರೂ ಮಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಗುರುವಾರ ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಮುಂದೆ ಬಸ್ ಪಾಸ್ ಸೌಲಭ್ಯ ಪಡೆಯುವ ಅರ್ಜಿಗಳನ್ನಿಟ್ಟುಕೊಂಡು ಜಮಾಯಿಸಿದ ವಿದ್ಯಾರ್ಥಿಗಳು ಸಹಿ ಹಾಕುವ ತನಕ ನಾವು ಇಲ್ಲಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದರು. ಕೆಲ ಗಂಟೆಗಳವರೆಗೂ ಪ್ರಾಂಶುಪಾಲರನ್ನು ಕಚೇರಿಯಿಂದ ಹೊರಗಡೆಗೆ ಹೋಗಲು ಬಿಡಲಿಲ್ಲ.
ಈಗಾಗಲೇ ಕಾಲೇಜಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಬಹುತೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆ ಇದೆ. ಇದರ ನಡುವೆಯೂ ಸಹ ಕಳೆದ ಒಂದು ವಾರದಿಂದ ಹಣ ಭರಿಸಿ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದೇವೆ. ಆದರೆ, ಹಣ ಕೊಟ್ಟು ಕಾಲೇಜಿಗೆ ಬರಲು ಆರ್ಥಿಕವಾಗಿ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ಅರ್ಜಿಗಳಿಗೆ ಸಹಿ ಹಾಕಬೇಕೆಂದು ಕೇಳಿಕೊಳ್ಳುತ್ತಿದ್ದರೂ ಪ್ರಾಂಶುಪಾಲರು ತಮ್ಮ ಮನವಿ ಆಲಿಸುತ್ತಿಲ್ಲ. ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತ ಇಲ್ಲಿಯವರೆಗೂ ನಿರ್ಲಕ್ಷ್ಯ ವಹಿಸಿಕೊಂಡು ಬಂದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಕಾಲೇಜು ಪ್ರಾರಂಭವಾದ ಮೊದಲ ದಿನ ಪ್ರಾಂಶುಪಾಲರನ್ನು ಕೇಳಿದಾಗ, ಜು.8 ರಂದು ಬಸ್ ಪಾಸ್ ಅರ್ಜಿಗೆ ಸಹಿ ಹಾಕುತ್ತೇನೆ ಎಂದಿದ್ದರು. ಆದರೆ, ಪ್ರತಿದಿನ ತಮ್ಮ ಕೊಠಡಿಯ ಮುಂದೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಕಾಯಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ನನಗೆ ಸಂಬಂಧವಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಕೆಲವರಿಗೆ ಮಾತ್ರ ಸಹಿ ಹಾಕಿ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರಶ್ನೆಪತ್ರಿಕೆ ಮೌಲ್ಯಮಾಪನ ಮಾಡಲು ಹೋಗಿರುವ ಉಪನ್ಯಾಸಕರಿಗೆ ಜವಾಬ್ದಾರಿ ವಹಿಸಿದ್ದು, ಅವರು ಕಾಲೇಜಿಗೆ ಬರುತ್ತಿಲ್ಲ. ಇನ್ನೂ ಕಾಲೇಜಿನಲ್ಲಿರುವ ಉಪನ್ಯಾಸಕರು ಸಹಿ ಮಾಡುವಂತಹ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಇದರಿಂದ ಪ್ರತಿದಿನ ಹಣ ತೆತ್ತು ಬರಬೇಕಾಗಿದೆ. ಈಗಾಗಲೇ ಬೇರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅರ್ಜಿಗೆ ಸಹಿ ಹಾಕಿಕೊಟ್ಟು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಬಡವರೇ ಹೆಚ್ಚಾಗಿ ಓದುವ ಈ ಕಾಲೇಜಿನಲ್ಲಿ ಮಾತ್ರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement