ಮುಗಳೂರು ಕಾಲುವೆ ಯೋಜನೆಗೆ ಹಣ ಮೀಸಲಿಗೆ ಒತ್ತಾಯ
ಮಾಲೂರು: ತಾಲೂಕಿನ ಕೆರೆಗಳಿಗೆ ನೀರುಣಿಸುವ ಮುಗಳೂರು ಕಾಲುವೆ ಯೋಜನೆಗೆ ಈ ಬಾರಿಯ ಆಯವ್ಯಯದಲ್ಲಿ ಹೆಚ್ಚುವರಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ಪ್ರಮೀಣ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಬುಧವಾರ ರಸ್ತೆ ತಡೆ ನಡೆಸಿದರು.
ಸಂಘಟನೆ ಅಧ್ಯಕ್ಷ ರಾಮಕೃಷ್ಣಪ್ಪ ಈ ಸಂದರ್ಭ ಮಾತನಾಡಿ, ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಜಿಲ್ಲೆಯಲ್ಲಿ ಅಂತರ್ಜಲಮಟ್ಟ 1500 ಅಡಿಗಳಿಗೆ ಇಳಿದಿದೆ. ಕೃಷಿ ನಂಬಿರುವ ರೈತರು ನೀರಿಲ್ಲದೆ ಕಂಗಲಾಗಿದ್ದಾರೆ. ಈ ನಿಟ್ಟಿನಲ್ಲಿ ಡಾ.ಪರಮಶಿವಯ್ಯ ವರದಿ ನಮ್ಮ ಪಾಲಿಗೆ ಕನಸಾಗುತ್ತಿದ್ದು, ಮುಗಳೂರು ಕಾಲುವೆ ನೀರು ಯೋಜನೆ ಜಿಲ್ಲೆಯ ಪಾಲಿಗೆ ಆಶಾದಾಯಕವಾಗಿ ಕಂಡುಬಂದಿದೆ ಎಂದರು.
ಯೋಜನೆಗೆ ಹೆಚ್ಚುವರಿಯಾಗಿ ನೀರು ಶುದ್ಧೀಕರಿಸಿ ಜಿಲ್ಲೆಯ ಕೋಲಾರ-ಬಂಗಾರಪೇಟೆ- ಮಾಲೂರುಗೆ ನೀರು ಹರಿಸಲು ಜು.12ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಮುಗಳೂರು ಕಾಲುವೆ ಹೋರಾಟ ಸಮಿತಿ ಅಧ್ಯಕ್ಷ ತ್ಯಾವನಹಳ್ಳಿ ಡಾ. ಎಂ.ಗೋಪಾಲ್‌ಗೌಡ, ಕಲಾವಿದ ಸ್ವಾಮಿ, ಚಂಬೆ ರಾಜೇಶ್, ಶ್ರೀರಾಮುಲು, ಕೂಪ್ಪ ಚಂದ್ರ, ದಯಾನಂದ್, ಶಿವಾರ ನಾಣಿ, ಚಲಪತಿ, ಕುಡಿಯನೂರು ಮಂಜು ಪ್ರತಿಭಟನೆಯಲ್ಲಿದ್ದರು.