ರೈತನ ಮೇಲಿನ ಹಲ್ಲೆ ಪ್ರಕರಣ; ಚರ್ಚೆ
ಚಿಂತಾಮಣಿ: ಪಟ್ಟಣದಲ್ಲಿನ ಎಪಿಎಂಸಿ ಟೋಮೆಟೋ ಮಾರುಕಟ್ಟೆಯಲ್ಲಿ ರೈತನ ಮೇಲಿನ ದಲ್ಲಾಳಿ ಹಲ್ಲೆ ಪ್ರಕರಣ ಹಾಗೂ ಲಾಠಿ ಪ್ರಹಾರ ಘಟನೆಗೆ ಸಂಬಂಧಿಸಿ ಗುರುವಾರ ಎಪಿಎಂಸಿ ಸಭಾಂಗಣದಲ್ಲಿ ಅಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಹಲವು ವರ್ತಕರು ಹಾಗೂ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಹಾಗೂ ಪದಾಧಿಕಾರಿಗಳು ಸಭೆ ನಡೆಸಿ ಜು.16 ರಂದು 2 ಗಂಟೆಗೆ ತಾಲೂಕಿನ ವ್ಯಾಪ್ತಿಯ ರೈತರು ಮತ್ತು ವರ್ತಕರು ಸಭೆ ಸೇರಿ ಇಂತಹ ಘಟನೆಗಳು ನಡೆಯದಂತೆ ಹಾಗೂ ಮಾರುಕಟ್ಟೆಯ ನಿಯಮ ನಿಬಂಧನೆಗಳ ಪ್ರಕಾರ ನಡೆದುಕೊಳ್ಳಲು ಸಭೆಗೆ ಎಲ್ಲಾ ರೈತರು ಹಾಗೂ ವರ್ತಕರು ಅಂದು ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಎ.ಪಿ.ಎಂ.ಸಿ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ಮಾಜಿ ಅಧ್ಯಕ್ಷ ಮುನಿರೆಡ್ಡಿ, ಸದಸ್ಯರಾದ ಹೆಚ್. ನಾರಾಯಣಸ್ವಾಮಿ, ಆಂಜಪ್ಪ, ಗೋಪಾಲರೆಡ್ಡಿ ಹಾಗೂ ವರ್ತಕರಾದ ಊಲವಾಡಿ ಕೃಷ್ಣಪ್ಪ, ನಾರಾಯಣಸ್ವಾಮಿ, ಕಾಗತಿ ಕೃಷ್ಣಪ್ಪ ಸೇರಿದಂತೆ ಇನ್ನೂ ಹಲವಾರು ಮಂದಿ ವರ್ತಕರು ಹಾಗೂ ಸದಸ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಯಾಷಿಯರ್ಗೆ ಪ್ರಾಣ ಬೆದರಿಕೆ
ಚಿಂತಾಮಣಿ: ರಾಷ್ಟ್ರೀಕೃತ ಬ್ಯಾಂಕಿನ ಕ್ಯಾಷಿಯರ್ ಅನ್ನು ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವುದಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಣದ ಎಂ.ಜಿ. ರಸ್ತೆ ಬಳಿ ಇರುವ ರಾಷ್ಟ್ರೀಕೃತ ಬ್ಯಾಂಕಿನ ಕ್ಯಾಷಿಯರ್ ಕಾರ್ಯನಿರತರಾಗಿದ್ದಾಗ ವ್ಯಕ್ತಿಯೊಬ್ಬ ಚೆಕ್ ವಿಷಯವಾಗಿ ಗುರುವಾರ ಮಧ್ಯಾಹ್ನ ಬ್ಯಾಂಕಿನಲ್ಲಿ ವಿನಾ ಕಾರಣ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ಬ್ಯಾಂಕಿನಲ್ಲಿ ರಂಪಾಟ ಮಾಡಿದ ಪರಿಣಾಮ ಕ್ಯಾಷಿಯರ್ ತನಗೆ ರಕ್ಷಣೆ ನೀಡಲು ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ.