ರೈತರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲಿ: ಡಾ.ಅನುರೂಪ
ಗೌರಿಬಿದನೂರು: ರೈತರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಅವರನ್ನು ಸಶಕ್ತರನ್ನಾಗಿ ಮಾಡುವುದು, ಮಳೆ ನೀರು ಸಂಗ್ರಹ, ಸಮಗ್ರ ಬೆಳೆ ನಿರ್ವಹಣೆ, ಕಡಿಮೆ ಖರ್ಚಿನಲ್ಲಿ ಆರೋಗ್ಯಕರ ಬೆಳೆ ಬೆಳೆಯುವ ಮುನ್ನ ತರಬೇತಿ ಶಿಬಿರಗಳಲ್ಲಿ ರೈತರು ಭಾಗವಹಿಸಿ ತಮ್ಮ ವೃತ್ತಿಪರ ಬೇಸಾಯದ ಕೌಶಲ ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಡಾ. ಎಂ.ಅನುರೂಪ ಹೇಳಿದರು.
ಇಲ್ಲಿನ ಹಳೇಹಳ್ಳಿ ಗುಚ್ಛ ಗ್ರಾಮದ ಸಮೀಪದ ಕಾಡಚಿಕ್ಕನಹಳ್ಳಿಯಲ್ಲಿ ದಾನಿ ರೈತ ಮಹಿಳೆ ಎಚ್.ಎಸ್. ವೇದರವರ ಕೃಷಿ ಭೂಮಿಯಲ್ಲಿ ದೀಪ ಬೆಳಗುವ ಮೂಲಕ ಭೂ ಚೇತನ ಯೋಜನೆಯ ರೈತ ಕ್ಷೇತ್ರ ಪಾಠ ಶಾಲೆಗೆ ಚಾಲನೆ ನೀಡಿ ರೈತರಲ್ಲಿ ಮನವಿ ಮಾಡಿಕೊಂಡರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಅನುವುಗಾರ ಎಚ್.ಎನ್. ಕಿರಣಕುಮಾರ್, ಇಂದು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ ಕಲುಷಿತಗೊಂಡು ವಿಷಮಯವಾಗುತ್ತಿದೆ.
ರಾಸಾಯನಿಕ ಗೊಬ್ಬರ-ಔಷಧಿಗಳನ್ನು ತೊರೆದು ಸಾವಯವ ಕೃಷಿಗೆ ರೈತರು ಬದಲಾಗಿ ಈ ಮೂಲಕ ಮನುಷ್ಯನ ಆರೋಗ್ಯ, ಪರಿಸರದ ಆರೋಗ್ಯ ಕಾಪಾಡುವ ತುರ್ತು ನಮಗೊದಗಿದೆ. ಕ್ಷೇತ್ರ ಪಾಠ ಶಾಲೆಯ ಪೂರ್ಣ ಪ್ರಮಾಣದ ಲಾಭ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಪಿ.ಎಸ್. ಸದಸ್ಯ ಎಂ.ನಾರಾಯಣಸ್ವಾಮಿ, ಕೃಷಿ ಇಲಾಖೆ ಸಕ್ರಿಯ, ಕ್ರಿಯಾಶೀಲವಾಗಿ ಯೋಜನೆ ಜಾರಿಗೊಳಿಸುತ್ತಿರುವುದು ಅಭಿನಂದನೀಯ.
ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಕೃಷಿ ಅಧಿಕಾರಿ ಕೆ.ವಿ.ಭವ್ಯಾ, ಪಂಚಾಯ್ತಿ ಅಧ್ಯಕ್ಷ ಉಮಾಶಂಕರ್, ಎಸ್ಡಿಎಂಸಿ ಅಧ್ಯಕ್ಷ ಹ.ನ. ರವೀಂದ್ರ, ರೈತ ಅನುವುಗಾರರಾದ ಸಿ.ಎ. ಗೋವಿಂದರಾಜು, ಶಿವಕುಮಾರ್, ಹರೀಶ್, ಗ್ರಾಮದ ಮುಖಂಡರಾದ ಶಿವಪ್ಪ, ಎಚ್.ಎಲ್. ಸೋಮಿ, ಶಶಿಕಲಾ, ಸೌಭಾಗ್ಯ, ಗಂಗರತ್ನಮ್ಮ, ಪಾರ್ವತಮ್ಮ, ವರದರಾಜು, ಸೋಮಲಿಂಗಪ್ಪ ಹಾಗೂ ಕ್ಷೇತ್ರ ಪಾಠ ಶಾಲೆಗೆ ದಾಖಲಾದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.