ಸರ್ಕಾರಿ ಸೌಲಭ್ಯ ಜೊತೆಗೆ ದಾನಿಗಳು ನೀಡುವ ಸವಲತ್ತು ಬಳಸಿ'
ಟೇಕಲ್: ವಿದ್ಯಾರ್ಥಿಗಳ ಸರ್ಕಾರ ನೀಡುವ ಸೌಲಭ್ಯಗಳ ಜೊತೆಗೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕೆಂದು ಮಾಲೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜಮೀರ್‌ಪಾಷ ತಿಳಿಸಿದರು.
ಮಾಸ್ತಿ ಹೋಬಳಿಯ ಹಸಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ, ಶಾಲಾ ಸಾಮಗ್ರಿಗಳು, ಕಂಪ್ಯೂಟರ್ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಓದು ಬರಹವನ್ನು ಕಲಿತರೆ ಸಾಲದು, ಉತ್ತಮ ವಿದ್ಯಾವಂತರಾಗಿ ಸಮಾಜದಲ್ಲಿ ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ತಮ್ಮ ಜೀವನ ಸಾರ್ಥಕವಾಗುತ್ತದೆ. ಬೆಂಗಳೂರಿನ ಕ್ಯಾಪ್ಸ್ ಫೌಂಡೇಷನ್ ಸಂಸ್ಥೆ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಸಮವಸ್ತ್ರ, ಪೀಠೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸದುಪಯೋಗಪಡಿಸಿಕೊಂಡು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಿ ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎಂದರು.
ಫೌಂಡೇಷನ್ ಸ್ಥಾಪನಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ ಸಂಸ್ಥೆ 5 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದು, ಸಂಸ್ಥೆಯಿಂದ ಏನಾದರೂ ಸಮಾಜಕ್ಕೆ ಕೊಡುಗೆಯಾಗಿ ನೀಡುವುದೆ ಸಂಸ್ಥೆಯ ಗುರಿಯಾಗಿದ್ದು, ಅದರಂತೆಯೇ ಅಂಗನವಾಡಿ ಕಾರ್ಯಕರ್ತೆ ಶೀವಳ್ಳಿರವರ ಬೇಡಿಕೆಯಂತೆ ಹಸಾಂಡಹಳ್ಳಿ ವ್ಯಾಪ್ತಿಗೆ ಬರುವ ಶಾಲೆಗಳಿಗೆ 6 ಲಕ್ಷ ರು. ಮೊತ್ತದ ಪೀಠೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಸಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಕುಪ್ಪೂರು, ರಾಯಸಂದ್ರ, ತೊಳಸನದೊಡ್ಡಿ, ವರದಾಪುರ, ನಟುರಳ್ಳಿ, ಕತ್ತರಹಳ್ಳಿ ಸೇರಿ ವಿವಿಧ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್‌ಪುಸ್ತಕ, ಟೇಬಲ್, ಚೇರ್, ಗಣಕಯಂತ್ರ ಸೇರಿದಂತೆ ವಿದ್ಯಾರ್ಥಿಗಳ ಕ್ರೀಡಾ ಸಾಮಗ್ರಿಗಳನ್ನು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸುಮಾರು 6 ಲಕ್ಷ ಮೊತ್ತದ ಪೀಠೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ಚಂದ್ರಶೇಖರ್ ಶೆಟ್ಟಿ ಹಾಗೂ ಸಿಬ್ಬಂದಿ ವಿತರಿಸಿದರು.
ಪೂರ್ಣಿಮಾ ಚಂದ್ರಶೇಖರ್, ಸಂಸ್ಥೆಯ ಅಧ್ಯಕ್ಷ ಹನಿಶ್ ಎಸ್.ಜೈನ್, ಕಾರ್ಯದರ್ಶಿ ಮಂಜುನಾಥ ಪ್ರಭು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಎ.ಎಂ. ರವಿ, ಸಿ.ಆರ್.ಪಿ. ರವಿಶಂಕರ್, ಅಂಗನವಾಡಿ ಕಾರ್ಯಕರ್ತೆ ಶ್ರೀವಳ್ಳಿ, ಮುಖ್ಯಶಿಕ್ಷಕರಾದ ಸಂಪಂಗಿರಾಮಯ್ಯ, ಕೃಷ್ಣಪ್ಪ, ಗೋವಿಂದಪ್ಪ, ಭಾಸ್ಕರ್, ಮಂಜುನಾಥ್, ನಾಗರಾಜ್, ಎಸ್. ನಾರಾಯಣಸ್ವಾಮಿ, ಗ್ರಾ.ಪಂ. ಸದಸ್ಯ ಕೆ.ಎನ್. ಮುನೆಯ್ಯ, ನಿವೃತ್ತ ಶಿಕ್ಷಕರಾದ ಬಿ. ಮುನಿಯಪ್ಪ, ಆಂಜಿನಪ್ಪ, ಕೆಂಪಣ್ಣ ಹಾಜರಿದ್ದರು.