29ರಂದು ನೇತ್ರ ತಪಾಸಣೆ
ಟೇಕಲ್: ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕೋಲಾರ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಜಿಲ್ಲಾ ಮತ್ತು ತಾಲೂಕು ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಭಾಗಿತ್ವದಲ್ಲಿ ಜು. 29ರಂದು ಕಣ್ಣಿನ ಪೊರೆ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಟೇಕಲ್ ಆರೋಗ್ಯ ಕೇಂದ್ರದಲ್ಲಿ ನೇತ್ರ ಪರೀಕ್ಷೆ ನಡೆಯಲಿದ್ದು, ತಪಾಸಣೆ ನಂತರ ಪೊರೆಯ ಶಸ್ತ್ರ ಚಿಕಿತ್ಸೆ ಅಗತ್ಯವಿರುವವರಿಗೆ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಅಕ್ಷಯಕುಮಾರ್ ತಿಳಿಸಿದ್ದಾರೆ.
ಶಿಕ್ಷಕ ಯಲ್ಲಪ್ಪ ಆಯ್ಕೆ ಮನವಿ
ಚಿಂತಾಮಣಿ: ಪ್ರೌಢಶಾಲಾ ಸಹ ಶಿಕ್ಷಕರ ಕುಂದು ಕೊರತೆಗಳ ಬಗ್ಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಹೋರಾಟ ಮಾಡುತ್ತಾ ಬಂದಿರುವ ತಮಗೆ ಮತದಾರರು ಆಶೀರ್ವದಿಸಬೇಕೆಂದು ಶಿಕ್ಷಕ ಕೆ.ವಿ.ಯಲ್ಲಪ್ಪ ಮನವಿ ಮಾಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸರ್ಕಾರಿ ನೌಕರರ ಸಂಘದ ಚುನಾವಣೆ(ಪ್ರೌಢಶಾಲಾ ವಿಭಾಗಕ್ಕೆ) ಸಂಬಂಧಿಸಿದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
ವಕೀಲ ರೆಡ್ಡೆಪ್ಪ ನಿಧನ: ಶ್ರದ್ಧಾಂಜಲಿ
ಶ್ರೀನಿವಾಸಪುರ: ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಕೊಂಡಸಂದ್ರದ ಬಿ.ಎ. ರೆಡ್ಡೆಪ್ಪ ಅವರ ನಿಧನಕ್ಕೆ ಪಟ್ಟಣದ ವಕೀಲರ ಸಂಘದ ಸದಸ್ಯರು ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಿ, ಸಂತಾಪ ಸೂಚಿಸಿದರು. ಕಲಾಪ ಸ್ಥಗಿತಗೊಳಿಸಿದ ವಕೀಲರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ಸಂತಾಪ ಸೂಚಿಸದರು.