ಆಹಾರಕ್ಕಾಗಿ ವಿದೇಶಿ ಅವಲಂಬನೆ: ಶ್ರೀರಾಮರೆಡ್ಡಿ
ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ 16 ನೇ ಜಿಲ್ಲಾ ರೈತ ಸಮ್ಮೇಳನ ಶುಕ್ರವಾರ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ(ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ, ಯಾವುದೇ ದೇಶ ಆಹಾರಕ್ಕಾಗಿ ಬೇರೊಂದು ದೇಶಗಳ ಮೇಲೆ ಅವಲಂಬಿತವಾಗುತ್ತದೆಯೋ ಆ ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾಗಿ ಸರ್ವನಾಶ ಹೊಂದಬೇಕಾಗುತ್ತದೆ ಎಂದು ತಿಳಿಸಿದರು.
ಇಂದು ದೇಶದ ಕೃಷಿ ರಂಗ ಉತ್ಪಾದನೆ 0.4 ರಷ್ಟಾಗಿದೆ. ಇದೇ ರೀತಿ ಕೃಷಿ ರಂಗ ಸಾಗಿದರೆ ದೇಶ ಉಳಿಯುವುದಿಲ್ಲ. ಮುಂದೆ ಆಹಾರ ಪದಾರ್ಥಗಳಿಗಾಗಿ ವಿದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಇಂದು ಕೃಷಿ ಕ್ಷೇತ್ರ ಬಿಕ್ಕಟಿಗೆ ಸಿಲುಕಿಲ್ಲ, ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುತ್ತಿರುವ ಸರ್ಕಾರದ ನೀತಿಯಿಂದಾಗಿ ದೇಶದ ಕೃಷಿ ಅವಸಾನದ ಅಂಚಿಗೆ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನು ಹೆಚ್ಚಿಸುತ್ತಿದೆ. ಒಂದು ಟನ್ ಯೂರಿಯಾಗೆ 6 ಸಾವಿರ ರು. ಹೆಚ್ಚಾಗಿದ್ದು, ವಿದ್ಯುಚ್ಛಕ್ತಿ ಮೇಲೆ ಒಂದು ಯೂನಿಟ್ಗೆ 2 ರು. ಹೆಚ್ಚು ಮಾಡುತ್ತಿದ್ದಾರೆ. ಇದು ರೈತ ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತದೆ. ದರ ಹೆಚ್ಚಳದಿಂದ ಮುಖೇಶ್ ಅಂಬಾನಿಗೆ 1.60 ಸಾವಿರ ಕೋಟಿ ಲಾಭವಾಗಲಿದೆ. ದೇಶದಲ್ಲಿ ರೈತರನ್ನು ರಕ್ಷಿಸುವ ಕಾನೂನು ಜಾರಿಯಾಗಬೇಕು, 66 ವರ್ಷಗಳಿಂದ ಆಳಿದ ಸರ್ಕಾರಗಳು ಕೃಷಿ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದೆ. ದೇಶದಲ್ಲಿ ಕೃಷಿ ವ್ಯವಸಾಯ ಭೂಮಿಯನ್ನು ವಶಪಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಟೀಕಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾಧ್ಯಕ್ಷ ಮಳ್ಳೂರು ಶಿವಣ್ಣ, ಸಂಘಟನಾ ಕಾರ್ಯದರ್ಶಿ ಗೋಪಿನಾಥ್, ಜಿ.ಪಂ. ಮಾಜಿ ಸದಸ್ಯ ರಾಮರೆಡ್ಡಿ, ಮುಖಂಡರಾದ ಎಂ.ಪಿ. ಮುನಿವೆಂಕಟಪ್ಪ, ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ, ಸೊಣ್ಣೇಗೌಡ, ನಾರಾಯಣಸ್ವಾಮಿ, ಪ್ರಗತಿಪರ ರೈತರಾದ ಶಿಡ್ಲಘಟ್ಟ ಕೆ.ಎಂ. ವೆಂಕಟೇಶ್ ಹಾಗೂ ಕೆ.ಎಮ. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.