ಮಾಸ್ತಿಯಲ್ಲಿ 'ಅನ್ನಭಾಗ್ಯ'ಕ್ಕೆ ಚಾಲನೆ
ಟೇಕಲ್: ರಾಜ್ಯದ 3 ಕೋಟಿ ಬಡವರು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಫಲ ಹೊಂದಲಿದ್ದು, ಮಾಲೂರು ತಾಲೂಕಿನ 38,620 ಕುಟುಂಬಗಳು ಹೊಸ ಪಡಿತರ ಪದ್ಧತಿ ಮೂಲಕ ಅಕ್ಕಿ ಪಡೆಯಲಿದೆ ಎಂದು ಶಾಸಕ ಮಂಜುನಾಥಗೌಡರು ತಿಳಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಒಂದು ಗೆ ಕೆಜಿಯಂತೆ 30 ಕೆಜಿ ಅಕ್ಕಿ ನೀಡುವ ಯೋಜನೆಗೆ ಮಾಸ್ತಿಯಲ್ಲಿ ಚಾಲನೆ ನೀಡಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರಾಜ್ಯ ಸರ್ಕಾರದ ಹೊಸ ಪಡಿತರ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಸೋರಿಕೆ ಇಲ್ಲದೆ ಸಮರ್ಪಕವಾಗಿ ಅಕ್ಕಿ ವಿತರಿಸಲು ಕಾರ್ಯನಿರ್ವಹಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಬೇಕೆಂದರು. ಜಿಪಂ ಸದಸ್ಯ ಯಶೋಧಮ್ಮ, ತಾಪಂ ಅಧ್ಯಕ್ಷ ಚಂದ್ರಪ್ಪ, ಕೆ.ವೈ. ನಂಜೇಗೌಡ ಮಾತನಾಡಿದರು. ತಾಪಂ ಸದಸ್ಯ ಗೋಪಾಲಗೌಡ, ಮಾಸ್ತಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಪಿ. ನಾರಾಯಣಸ್ವಾಮಿ, ಬೀರಪ್ಪ, ಆಲೂಗಡ್ಡೆ ಮಂಜು, ಚಿನ್ನಸ್ವಾಮಿಗೌಡ, ವೆಂಕಟೇಶ್, ಮುನಿಸ್ವಾಮಿಗೌಡ, ಆಹಾರ ಶಿರಸ್ತೆದಾರ ರಾಮಚಂದ್ರಪ್ಪ, ಶಿರಸ್ತೇದಾರ್ ಸತ್ಯಪ್ರಕಾಶ್, ಆಹಾರ ನಿರೀಕ್ಷಕರಾದ ವಿಜಯಾಂಬಿಕೆ, ಸಂಜೀವಗೌಡ ಇದ್ದರು.