ಶಿಕ್ಷಕರ ನಿಯೋಜನೆ ರದ್ದು ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಜು.12
ತಾಲೂಕಿನ ವಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2009-2010ನೇ ಸಾಲಿನಿಂದ ಸಹ ಶಿಕ್ಷಕರಾಗಿ ನಿಯೋಜನೆಗೊಂಡಿರುವ ವಿ.ಸೋಮಶೇಖರ್ ಅವರನ್ನು ಕಾಯಂ ಶಿಕ್ಷಕರನ್ನಾಗಿ ಮುಂದುವರೆಸಬೇಕೆಂದು ಒತ್ತಾಯಿಸಿ ಶಾಲಾ ಮಕ್ಕಳು ಮತ್ತು ಪೋಷಕರು ಕೋಲಾರ ನಗರದಲ್ಲಿ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಕಳೆದ 2009ರ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಂಡಿತ್ತು. ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಹಿನ್ನಡೆಯಾಗಿತ್ತು. ಶಾಲಾ ವಾತಾವರಣ ತುಂಬಾ ಹದೆಗೆಟ್ಟಿದ್ದ ಸಂದರ್ಭದಲ್ಲಿ ಶಿಕ್ಷಕ ವಿ.ಸೋಮಶೇಖರ್ ಯೋಜನೆಯಾಗಿ ಬಂದ ನಂತರ ಈ ಶಾಲೆ ಅಭಿವೃದ್ಧಿ ಹೆಚ್ಚಾಗಿದ್ದು ಅವರನ್ನೇ ಮುಂದೆವರೆಸುವಂತೆ ಬಿಇಒ ಶಿವಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪೋಷಕರ ಒತ್ತಾಯದ ಮೇರೆಗೆ ಬಿಇಒ ಶಿವಲಿಂಗಯ್ಯ ಶಿಕ್ಷಕ ಸೋಮಶೇಖರ್ ಅವರನ್ನು ತಾತ್ಕಾಲಿಕವಾಗಿ ವಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸಹ ಶಿಕ್ಷಕರಾಗಿ ಮುಂದುವರೆಸಲಾಗಿದೆ. ಮುಂದೆ ಉಪನಿರ್ದೇಶಕರ ಆದೇಶದಂತೆ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮುನಿರಾಜ್, ಸಾಮಾಜಿಕ ಪರಿವರ್ತನಾ ಜನಾಂದೋಲನ ಜಿಲ್ಲಾ ಸಂಚಾಲಕ ಕೆ.ಮುನಿವೆಂಕಟಪ್ಪ, ಆದಿಮ ಶಕ್ತಿ ದಲಿತ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಆದಿಮ ಶಕ್ತಿ ವಿದ್ಯಾರ್ಥಿ ಮತ್ತು ಯುವಜನ ವೇದಿಕೆ ಮತ್ತು ಆದಿಮ ಶಕ್ತಿ ಕೃಷಿ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು, ಗ್ರಾಮದ ಮುಖಂಡರು ವೆಂಕಟೇಶ್
ಗ್ರಾ.ಪಂ.ಸದಸ್ಯ ಎಂ.ಚಂದ್ರಪ್ಪ, ಉಪಾಧ್ಯಕ್ಷ, ಸಿ.ರಮೇಶ್, ಪೋಷಕರಾದ ಎಂ.ಮುನಿಯಪ್ಪ, ಲೋಕೇಶ್, ಸುಬ್ಬಣ್ಣ, ಸೋಮು, ಪ್ರಕಾಶ್, ಆಂಜಿನಪ್ಪ, ಚಂದ್ರಪ್ಪ, ಶಾಲಾ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.