15 ದಿನ ಮೊದಲೇ ಸೂಚಿಸಿದ್ದರೂ ಸಭೆಗೆ ಅಧಿಕಾರಿಗಳ ಗೈರು!
ಶಿಡ್ಲಘಟ್ಟ: ದಲಿತ ಹಿತರಕ್ಷಣಾ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ತಾಲೂಕಿನ ಸರ್ಕಾರಿ ಅಧಿಕಾರಿಗಳ ವಿರುದ್ಧ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ತಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಬೆಳಿಗ್ಗೆ 11 ಘಂಟೆಗೆ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ದಲಿತ ಹಿತರಕ್ಷಣಾ ಸಮಿತಿಯ ಸಭೆಗೆ 15 ದಿನಗಳ ಮುಂಚೆಯೇ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೂ ಅವರವರ ಇಲಾಖೆಗಳಿಗೆ ಸರ್ಕಾರದಿಂದ ಬರುವ ಅನುದಾನ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಡಬೇಕಾದ ಅನುದಾನಗಳ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ಆದರೂ ಶನಿವಾರ ಬೆಳಿಗ್ಗೆ 11 ಘಂಟೆಗೆ ಸಭೆಯನ್ನು ಪ್ರಾರಂಭಿಸಬೇಕಾದ ಸಂದರ್ಭದಲ್ಲಿ ತಹಸೀಲ್ದಾರರು, ಸಮಾಜ ಕಲ್ಯಾಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಹೊರತುಪಡಿಸಿ ಬೇರಾವುದೇ ಅಧಿಕಾರಿಗಳು ಹಾಜರಾಗಿರಲಿಲ್ಲ. ಇದನ್ನು ಕಂಡು ಕೆರಳಿದ ದಲಿತ ಸಂಘಟನೆಗಳ ಮುಖಂಡರು ಸಭೆ ನಡೆಯುತ್ತಿದ್ದ ತಾಪಂ ಸಭಾಂಗಣದಿಂದ ಹೊರ ನಡೆದು ಗೈರಾಗಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಒಂದೂವರೆ ವರ್ಷದ ನಂತರ ತಾಲೂಕು ಆಡಳಿತ ದಲಿತ ಹಿತರಕ್ಷಣಾ ಸಭೆ ಕರೆದಿದ್ದು, ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಗೈರಾಗಿರುವುದು ಅಧಿಕಾರಿಗಳಿಗೆ ದಲಿತರ ಮೇಲಿರುವ ನಿರ್ಲಕ್ಷ್ಯ ತೋರಿಸುತ್ತದೆ.
ತಾಲೂಕಿನಲ್ಲಿ ದಲಿತರಿಗೆ ಸಿಗಬೇಕಾದ ಸೌಲಭ್ಯಗಳು ಮೇಲ್ವರ್ಗದವರ ಪಾಲಾಗುತ್ತಿದ್ದು, ಸಭೆಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತವೆ ಎಂಬ ಭಯದಿಂದ ಕೆಲವು ಅಧಿಕಾರಿಗಳು ಅವರ ಪರವಾಗಿ ಅವರ ಕೈಕೆಳಗಿನ ಅಧಿಕಾರಿ ಹಾಗು ಗುಮಾಸ್ತರನ್ನು ಸಭೆಗೆ ಕಳುಹಿಸುವ ತಂತ್ರವನ್ನು ಮಾಡಿದ್ದಾರೆ. ದಲಿತರ ಸಮಸ್ಯೆ ಪರಿಹರಿಸುವಲ್ಲಿ ತಾಲೂಕಿನ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲವೇ ನಮ್ಮ ಮೇಲೆ ಕೇಸು ದಾಖಲು ಮಾಡಿ ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರನ್ನು ಓಲೈಸಲು ಪ್ರಯತ್ನಿಸಿದ ತಹಸೀಲ್ದಾರ್ ಟಿ.ಎ.ಹನುಮಂತರಾಯ ಕೊನೆಗೆ ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಅಧಿಕಾರಿಗಳು ಗೈರಾಗಿರುವ ಬಗ್ಗೆ ತಿಳಿಸಿದರು. ಸಭೆಗೆ ಹಾಜರಾಗದಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆಂದು ಮನವೊಲಿಸುವ ಯತ್ನ ಮಾಡಿದರೂ ಪ್ರತಿಭಟನಾ ನಿರತರು ಒಪ್ಪದೆ ಪ್ರತಿಭಟನೆ ಮುಂದುವರೆಸಿದರು.
ನಂತರ ತಾಲೂಕು ಪಂಚಾಯಿತಿ ಸಭಾಂಗಣಕ್ಕೆ ನುಗ್ಗಿ ಗೈರಾಗಿರುವ ಅಧಿಕಾರಿಗಳ ಮೇಲೆ ಕೂಡಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ಕಚೇರಿಗೆ ಬೀಗ ಹಾಕುವುದಾಗಿ ಬೆದರಿಕೆ ಹಾಕಿದರು.
ತಹಸೀಲ್ದಾರರಾಗಿ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಅಧಿಕಾರಿಗಳಿಗೆ ನೋಟಿಸ್ ನೀಡಲಷ್ಟೆ ಸಾಧ್ಯ. ಅವರ ಮೇಲೆ ಪ್ರಕರಣ ದಾಖಲಿಸುವುದು ಹಾಗೂ ಅಮಾನತ್ತು ಪಡಿಸುವುದು ಜಿಲ್ಲಾಧಿಕಾರಿಗಳಿಂದ ಮಾತ್ರ ಸಾಧ್ಯ. ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು. ಇದೇ ತಿಂಗಳ 27ನೇ ತಾರಿಖಿನಂದು ಮತ್ತೆ ಸಭೆ ನಡೆಸಲಾಗುವುದು. ಸಭೆಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ದಸಂಸ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಟಿ.ಮಂಜುನಾಥ್, ತಾಲೂಕು ಸಂಚಾಲಕರಾದ ಕೆ.ಎಸ್.ದ್ಯಾವಕೃಷ್ಣಪ್ಪ, ನಡಿಪಿನಾಯಕನಹಳ್ಳಿ ವೆಂಕಟೇಶ್, ಎಚ್.ರಾಮಾಂಜಿನಪ್ಪ, ದಢಂಘಟ್ಟ ತಿರುಮಲೇಶ್, ನರಸಿಂಹಮೂರ್ತಿ, ಯಾಮಾ ನಾರಾಯಣಸ್ವಾಮಿ, ನಾಗನರಸಿಂಹ, ಕೆ.ಎನ್.ಮುನೀಂದ್ರ, ಇದ್ದರು.