ಐಟಿಐ ವಿದ್ಯಾರ್ಥಿ ಸೇರಿ 3 ಯುವಕರ ಬಂಧನ
ಕ.ಪ್ರ.ವಾರ್ತೆ ಮಾಲೂರು ಜು. 13
ಕಳೆದ ತಿಂಗಳ 18 ರಂದು ಪಟ್ಟಣದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ರೌಡಿ ಶೀಟರ್ ಪ್ರಸಾದ್ ಕುಮಾರ್ ಪ್ರಕರಣವನ್ನು ಸ್ಥಳೀಯ ಪೊಲೀಸರು ಭೇದಿಸಿದ್ದು, ಹತ್ಯೆಯಲ್ಲಿ ಭಾಗಿಯಾಗಿದ್ದ ಐಟಿಐ ವಿದ್ಯಾರ್ಥಿ ಸೇರಿದಂತೆ ಪಟ್ಟಣದ ಮೂರು ಯುವಕರನ್ನು ಬಂಧಿಸಿದ್ದಾರೆ.
ಬಂಧಿತ ಮೂವರು ಪಟ್ಟಣದ ವಾಸಿಗಳಾಗಿದ್ದು, ರಾಜೀವ್ ನಗರದ ಪ್ರೇಮ್ ಕುಮಾರ್(19)ಐಟಿಐ ವಿದ್ಯಾರ್ಥಿ ಮಣಿಕಂಠ ಶರ್ಮ(19)ಹಾಗೂ ಆರ್.ಎಫ್. ರಸ್ತೆಯ ಕೃಷ್ಣಮೂರ್ತಿ(19)ಎಂದು ಗುರುತಿಸಲಾಗಿದೆ. ಮೃತ ಪ್ರಸಾದ್ ಕುಮಾರ್ನ ಸ್ನೇಹಿತರಾಗಿರುವ ಈ ಮೂರು ಅರೋಪಿಗಳು ರೌಡಿಶೀಟರ್ನಲ್ಲಿದ್ದ ಮೃತ ಪ್ರಸಾದ್ ಕುಮಾರ್ನಿಂದ ಬಹಳಷ್ಟು ಕಿರುಕುಳ ಸಹ ಅನುಭವಿಸುತ್ತಿದ್ದರು ಎನ್ನಲಾಗಿದೆ.
ಮೃತನ ಟಾರ್ಚರ್ ತಡೆಯಲಾರದೆ ಕೊಲೆಗೆ ಸಂಚು ರೂಪಿಸಿದ್ದರು ಎಂದು ಘಟನೆ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದ ಇನ್ಸ್ ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.
ಮೃತ ಪ್ರಸಾದ್ ಕುಮಾರ್ ಈಗಾಗಲೇ 307 ಅಡಿ 3 ಪ್ರಕರಣಗಳಲ್ಲಿ 302 ನ ಎರಡು ಪ್ರಕರಣದಲ್ಲಿ ಹಾಗೂ 3 ಕಳ್ಳತನ ಪ್ರಕರಣಗಳಲ್ಲಿ ಇದ್ದು, ಹೊಸಕೋಟೆ ಹಾಗೂ ಮಾಲೂರು ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿಸಿದ್ದಾರೆ. ರೌಡಿ ಶೀಟರ್ ಪ್ರಸಾದ್ ಕುಮಾರ್ ಕೊಲೆ ಮಾಡಲು ಸಂಚು ಹೊಡಿದ್ದ ಈ ಮೂವರು ಆರೋಪಿಗಳು ಜೂನ್ 18 ರ ಸಂಜೆ ಇಂದಲ್ಲೇ ಮೃತನ ಜೊತೆಯಲ್ಲಿ ತಿರುಗಾಡಿದರಲ್ಲದೇ ತಡರಾತ್ರಿ ಕೊಲೆಯಾದ ಘಟನಾ ಸ್ಥಳಕ್ಕೆ ಕರೆದುಕೊಂಡ ಬಂದ ಆರೋಪಿಗಳು ಒಟ್ಟಾಗಿ ಕುಳಿತು ಕುಡಿದರಲ್ಲದೇ ಮೃತನ ಜತೆ ಜಗಳ ತೆಗೆದು ಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರೇಮ್ ಹಾಗೂ ಕೃಷ್ಣಮೂರ್ತಿ ಮಚ್ಚಿನಿಂದ ಹಲ್ಲೆ ಮಾಡಿದರಲ್ಲದೇ ಮಣಿಕಂಠ ಇಟ್ಟಿಗೆಯಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ ಇನ್ಸ್ಪೆಕ್ಟರ್ ರವರು ಕೊಲೆ ಮಾಡಿದ ನಂತರ ಆಯುಧಗಳನ್ನು ಪಕ್ಕದ ನಾಚೋಹಳ್ಳಿ ಚೆಕ್ ಡ್ಯಾಂ ನಲ್ಲಿ ಬಚ್ಚಿಟ್ಟು ನಂತರ ಲಾರಿ ಹಿಡಿದು ಮಾಸ್ತಿ ಮೂಲಕ ತಮಿಳುನಾಡಿನ ಹೊಸೂರುಗೆ ತೆರಳಿದ್ದರು ಎಂದರು.
ಜಿಲ್ಲಾ ಎಸ್ಪಿ ರಾಮ್ನಿವಾಸ್ ಸಪಟ್ ಮಾರ್ಗದರ್ಶನದಲ್ಲಿ ಸಿಕ್ಕಿದ ಖಚಿತ ಮಾಹಿತಿ ಮೇರಿಗೆ ಸರ್ಜಾಪುರದಲ್ಲಿದ್ದ ಈ ಮೂರು ಆರೋಪಿಗಳನ್ನು ಎಸ್ಐ ಮೋಹನ್ ರೆಡ್ಡಿ ಹಾಗೂ ಮುನಿಸ್ವಾಮಿ ನೀಲಕಂಠ ರವರು ಇಲ್ಲಿಗೆ ಕರೆತಂದು ಬಂಧಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.
ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕೃತ್ಯಕ್ಕೆ ಬಳಸಲಾಗಿದ್ದ ಮಚ್ಚು-ಲಾಂಗುಗಳನ್ನು ವಶಶಪಡಿಸಿಕೊಂಡಿದ್ದು, ಜಿಲ್ಲಾ ಎಸ್ಪಿ ರವರು ಶ್ರಮಮಟ್ಟ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.