ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ

Mainashree
Updated On : 13 Jul 2013, 11:28 am

ಕ.ಪ್ರ.ವಾರ್ತೆ  ಕೋಲಾರ  ಜು. 13
ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭಗೊಂಡಿರುವ ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಜು.18ರಂದು 11 ಗಂಟೆಗೆ ಹೊಂಡಾ ಕಂಪನಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನರಸಾಪುರ ಸೇರಿದಂತೆ ಇನ್ನಿತರ ಕಡೆ ಕೈಗಾರಿಕೆ ಸ್ಥಾಪಿಸಲು ರೈತರು ಭೂಮಿ ನೀಡಿದ್ದಾರೆ.
ಭೂಮಿ ಮಾರಾಟದಲ್ಲಿ ಬಂದ ಹಣ ಶಾಶ್ವತವಾಗಿ ಉಳಿಯಲ್ಲ. ಕೈಗಾರಿಕೆಗಳ ಮಾಲೀಕರು ರೈತ ಕುಟುಂಬದ ಸದಸ್ಯರಿಗೆ ಕೆಲಸ ನೀಡಿದಲ್ಲಿ ಜೀವನಕ್ಕೆ ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲಿ ಯಾವುದೇ ಹೊಸ ಖಾಸಗಿ ಕಾರ್ಖಾನೆಗಳು ಆರಂಭಗೊಂಡರೂ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಡಾ. ಸರೋಜಿನಿ ಮಹಿಷಿ ಅವರು ಹತ್ತಾರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಯಾವುದೇ ಸರ್ಕಾರ ಈ ವರದಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರುತ್ತಿಲ್ಲ. ಹೊಂಡಾ ಕಂಪನಿ ಪ್ರಾರಂಭಿಸುವಾಗ ಸರ್ಕಾರ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಹೇಳಿತ್ತು ಹಾಗೂ ಕಾರ್ಖಾನೆಯ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು, ಅದರಂತೆ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಐಟಿಐ, ಡಿಪ್ಲೊಮಾ, ಬಿಬಿಎಂ, ಬಿಇ ಸೇರಿದಂತೆ ಅನೇಕ ವಿದ್ಯಾರ್ಹತೆ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಇದ್ದರೂ ಬೇರೆ ರಾಜ್ಯದ ಜನತೆಗೆ ಆದ್ಯತೆ ನೀಡುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಲು ಜು.16ರಂದು ಪ್ರತಿಭಟನೆ ನಡೆಸುತ್ತಿದ್ದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವ ವಹಿಸಲಿದ್ದಾರೆಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಇ.ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಪ್ರಭಾಕರ್ರಾವ್, ಮುಖಂಡರಾದ ಶ್ರೀನಿವಾಸ್, ಕೋದಂಡರಾಮಯ್ಯ, ನಂಜುಂಡಪ್ಪ, ಅನಂತಲಕ್ಷ್ಮಿ, ಲತಾಬಾಯಿ, ಎಸ್.ಎಂ.ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement