ಡಕಾಯಿತರ ಪತ್ತೆಗೆ 2 ವಿಶೇಷ ತಂಡ ರಚನೆ: ಸ್ಥಳಕ್ಕೆ ಐಜಿಪಿ ಭೇಟಿ
ಕೋಲಾರ: ತಾಲೂಕಿನ ನೆರ್ನಹಳ್ಳಿಯ ಮುನಿಯಪ್ಪ ಎಂಬುವರ ಮನೆಯ ಮೇಲೆ ದಾಳಿ ಮಾಡಿ ನಗ-ನಾಣ್ಯ ದೋಚಿರುವ ಡಕಾಯಿತರ ಪತ್ತೆಗಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ನಿನ್ನೆ ಮಧ್ಯ ರಾತ್ರಿ ಭೇಟಿ ನೀಡಿದ್ದ ಐಜಿಪಿ ಅಮರ್ಕುಮಾರ್ ಪಾಂಡೆ ಅವರು ಅದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಂತೆ ವಿಶೇಷ ತಂಡಕ್ಕೆ ಸೂಚಿಸಿದ್ದಾರೆ.
8 ಮಂದಿ ಡಕಾಯಿತರು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದರಿಂದ ಗಾಯಗೊಂಡಿರುವ ಮುನಿಯಪ್ಪ, ನರೇಂದ್ರ, ರತ್ನಮ್ಮ, ಜಯಮ್ಮ, ಜಗದೀಶ್, ಚೇತನ ಅವರನ್ನು ಚಿಕಿತ್ಸೆಗಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಲಾಗಿದ್ದು, ಇಲ್ಲಿಗೂ ಭೇಟಿ ನೀಡಿದ್ದ ಐಜಿಪಿ ಅಮರ್ಕುಮಾರ್ ಪಾಂಡೆ ಅವರು ಹೆಚ್ಚಿನ ಮಾಹಿತಿ ಪಡೆದುಕೊಂಡರು.
ಮುನಿಯಪ್ಪ ಮನೆ ಕೆಲಸಗಾರನೊಬ್ಬ ಕಳೆದ 1 ವಾರದಿಂದ ನಾಪತ್ತೆ ಆಗಿರುವುದು ಹಾಗೂ ಮನೆ ಕಾವಲಿಗಾಗಿ ಸಾಕಿದ್ದ ನಾಯಿಯು ಕಾಣದಿರುವುದರಿಂದ ಪೊಲೀಸರು ಈ ಕೃತ್ಯವನ್ನು ಮುನಿಯಪ್ಪ ಅವರಿಗೆ ಗೊತ್ತಿರುವವರೇ ಮಾಡಿರಬೇಕೆಂದು ಶಂಕಿಸಿದ್ದಾರೆ.
ಮುನಿಯಪ್ಪ ಅವರು ತಮ್ಮ ಮಗಳ ಮದುವೆಗಾಗಿ ಸಿದ್ಧತೆ ನಡೆಸುತ್ತಿದ್ದು ಚಿನ್ನಾಭರಣ ಮನೆಯಲ್ಲಿಟ್ಟಿರಬಹುದೆಂದು ತಿಳಿದು ಅದನ್ನು ದೋಚಲು ದಾಳಿ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಡಕಾಯಿತರು 170 ಗ್ರಾಂ ತೂಕದ ಸುಮಾರು 4 ಲಕ್ಷ ವೆಚ್ಚದ ಚಿನ್ನಾಭರಣ ಹಾಗೂ 20000 ನಗದು ದೋಚಿ ಪರಾರಿಯಾಗಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಜಿಲ್ಲಾ ಎಸ್ಪಿ ಡಾ.ರಾಮ ನಿವಾಸ್ ಸಫಟ್ ಅವರಲ್ಲದೆ ಎಎಸ್ಪಿ ಭಗವಾನ್ದಾಸ್ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.