ಪರಮಶಿವಯ್ಯ ಯೋಜನೆ ನಿರ್ಲಕ್ಷ್ಯ: ಪ್ರತಿಭಟನೆ
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಬಯಲುಸೀಮೆ ಜಿಲ್ಲೆಗಳಿಗೆ ಪರಮಶಿವಯ್ಯನವರ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡದಿರುವುದು ಹಾಗೂ ಜಿಲ್ಲೆಗೆ ಆದ್ಯತೆ ನೀಡದಿರುವುದನ್ನು ಖಂಡಿಸಿ ಸಿಪಿಎಂ ಕಾರ್ಯಕರ್ತರು ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ಭವನದ ಬಳಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಶಿಡ್ಲಘಟ್ಟ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಸಿಪಿಎಂ ಮುಖಂಡ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಬಯಲುಸೀಮೆ ಜಿಲ್ಲೆಗಳಲ್ಲಿ ಇಂದು ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಇದರಿಂದ ಈ ಭಾಗದ ಜನತೆ ಅನೇಕ ಮಾರಕ ರೋಗಗಳಿಗೆ ತುತ್ತಾಗಿದ್ದಾರೆ. ಕನಿಷ್ಠ ಈ ಕಾರಣಕ್ಕಾದರೂ ರಾಜ್ಯ ಸರ್ಕಾರ ಗಮನ ಹರಿಸದೆ, ಜಿಲ್ಲೆಯ ಪ್ರಗತಿಗೆ ನಿರ್ಲಕ್ಷ್ಯ ತೋರಿದೆ. ಪ್ಲೋರೈಡ್ಯುಕ್ತ ನೀರನ್ನು ಕುಡಿದು ಅನೇಕ ಮಂದಿ ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ. ಪರಮಶಿವಯ್ಯನವರ ವರದಿ ಅನುಷ್ಠಾನ ಮಾಡಬೇಕು. ಬಜೆಟ್ನಲ್ಲಿ ಪರಮಶಿವಯ್ಯನವರ ವರದಿ ಡಿಪಿಆರ್ ಮಾಡಲು 50 ಕೋಟಿ ಹಣ ಮೀಸಲಿಡಲಾಗಿದೆ ಎಂದು ಹೇಳುತ್ತಿದೆ. ಆದರೆ ಡಿಪಿಆರ್ ಯಾವ ರೀತಿಯಲ್ಲಿ ಮಾಡುತ್ತೇವೆ, ಎಷ್ಟು ಸಮಯದಲ್ಲಿ ಡಿಪಿಆರ್ ಮುಗಿಯುತ್ತದೆ ಎಂಬ ಆಲೋಚನೆ ಮಾಡಿಲ್ಲ. ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಗೆ ಮಾತ್ರ ತನಗೆ ಪೂರಕವಾದ ರೀತಿಯಲ್ಲಿ ಕಾಂಗ್ರೆಸ್ ಬಜೆಟ್ ಮಂಡಿಸಿದೆ. ಇದನ್ನು ಸಿಪಿಎಂ ವಿರೋಧಿಸುತ್ತದೆ ಎಂದರು.
ಎತ್ತಿನಹೊಳೆ ಅವೈಜ್ಞಾನಿಕ ಯೋಜನೆ. ಇದರಿಂದ ರೈತರ ಕೃಷಿಗೆ ಹಾಗೂ ಕುಡಿಯಲು ನೀರು ದೊರೆಯುವುದಿಲ್ಲ. ಎತ್ತಿನಹೊಳೆ ಯೋಜನೆ ಜಾರಿ ಮಾಡುವ ಮೂಲಕ ಶಾಶ್ವತವಾಗಿ ನೀರಾವರಿ ಯೋಜನೆ ಇಲ್ಲದಂತೆ ಮಾಡಲು ಸರ್ಕಾರ ಹೊರಟಿದೆ. ಇಂದು ಪರಮಶಿವಯ್ಯನವರ ಹೆಸರು ಹೇಳಲಿಲ್ಲ ಎಂದರೆ ರೈತರು, ಜನರು ರೊಚ್ಚಿಗೇಳುತ್ತಾರೆ ಎಂದು ಬಜೆಟ್ನಲ್ಲಿ ಹಣ ಮೀಸಲಿಟ್ಟಿದ್ದಾರೆ ಎಂದರು.
ಸಿಪಿಎಂ ಮುಖಂಡರಾದ ಗೋಪಿನಾಥ್, ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಕುಂದಲಗುರ್ಕಿ ಮುನೀಂದ್ರ ಇತರರು ಇದ್ದರು.