ಹಣ ಸಿಕ್ಕಿದೆ, ಯೋಜನೆ ಜಾರಿಯಷ್ಟೇ ಬಾಕಿ..
ಕ.ಪ್ರ.ವಾರ್ತೆ ಕೋಲಾರ ಜು. 13
ಶಾಶ್ವತ ನೀರಾವರಿಗಾಗಿ ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ನಡೆಸಿರುವ ಹೋರಾಟಕ್ಕೆ ತಕ್ಕಮಟ್ಟಿಗೆ ಜಯ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಎತ್ತಿನ ಹೊಳೆಗೆ 1 ಸಾವಿರ ಕೋಟಿ ಹಾಗೂ ಡಾ.ಪರಮಶಿವಯ್ಯನವರು ಪಶ್ಚಿಮಘಟ್ಟಗಳಲ್ಲಿ ಮಳೆಯ ನೀರು ಸಮುದ್ರಕ್ಕೆ ಹೋಗುವುದನ್ನು ತಡೆದು ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಸಲು ರೂಪಿಸಿರುವ ಯೋಜನೆಯ ಕುರಿತು ಸಮಗ್ರ ಯೋಜನಾ ವರದಿ ತಯಾರಿಸಲು 50 ಕೋಟಿ ರು. ಘೋಷಣೆ ಮಾಡಿರುವುದರಿಂದ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಮತ್ತು ಇಚ್ಛಾಶಕ್ತಿಯಿಂದ ಕೆಲಸ ಮಾಡಿದಲ್ಲಿ ಆದಷ್ಟು ಬೇಗನೆ ನೀರು ಹರಿಸುವುದು ಕಷ್ಟವಾಗಲಾರದು.
ಎತ್ತಿನ ಹೊಳೆಯಿಂದ ಹರಿಸುವ 24 ಟಿಎಂಸಿ ನೀರು ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬುದು ಕೆಲವರ ವಾದ, ಈ ಯೋಜನೆ ವ್ಯರ್ಥ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ, ಬಂಗಾರಪೇಟೆ ತಾಲೂಕಿನ ಕಾಮಸಮುದ್ರ, ಮಾಲೂರಿನ ಜಯಮಂಗಲಕ್ಕೆ ನೀರು ತಲುವುದು ಕಷ್ಟ, ಡಾ. ಪರಮಶಿವಯ್ಯನವರ ಯೋಜನೆಯನ್ನೇ ಜಾರಿಗೆ ತನ್ನಿ ಎಂದು ವಾದ ಮಂಡಿಸುತ್ತಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸುತ್ತಿರುವವರ ಅನುಮಾನ ನಿವಾರಣೆ ಮಾಡಬೇಕಾದರೆ ಆದಷ್ಟು ಬೇಗನೆ ಯೋಜನೆಗೆ ಚಾಲನೆ ನೀಡುವುದಕ್ಕೆ ಬದ್ಧತೆಯಿಂದ ಜವಾಬ್ದಾರಿ ನಿರ್ವಹಿಸಬೇಕಾಗಿದೆ.
ಇಲ್ಲದಿದ್ದರೆ ಎತ್ತಿನಹೊಳೆಯು ಸಹ ವಾದ-ವಿವಾದಗಳಿಂದಾಗಿ ಕೈತಪ್ಪಿದರೆ ಬಯಲು ಸೀಮೆ ಜಿಲ್ಲೆಗಳು ಅತಿ ಶೀಘ್ರವೇ ಮರಳುಗಾಡು ಆಗುವುದರಲ್ಲಿ ಸಂಶಯವಿಲ್ಲ.
ಕೂಸು ಹುಟ್ಟುವ ಮುನ್ನ ಖುಲಾವಿ ಹೊಲಿಸಿದ್ರು ಎಂಬಂತೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಂಗಾರಪೇಟೆ ತಾಲೂಕಿನ ಬಳಿಯ ಯರಗೋಳ್ ಯೋಜನೆಗೆ ಸಂಬಂಧಪಟ್ಟ ಡ್ಯಾಮ್ ನಿರ್ಮಾಣಕ್ಕೆ ಮುಂಚೆಯೇ ಪೈಪ್ಲೈನ್ ಕಾಮಗಾರಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದ್ದ 89 ಕೋಟಿ ರು.ಗಳಲ್ಲಿ ಸಾಕಷ್ಟು ಹಣ ಖರ್ಚು ಆಗಿ ವರ್ಷಗಳೇ ಕಳೆದಿದ್ದರೂ ಮುಖ್ಯ ಕಾಮಗಾರಿಯಾದ ಡ್ಯಾಮ್ ನಿರ್ಮಾಣಕ್ಕೆ ಭೂಮಿಯ ಹಸ್ತಾಂತರವಾಗದಿರುವುದರಿಂದ ಯೋಜನೆ ನೆನಗುದಿಗೆ ಬೀಳುವಂತಾಗಿದೆ.
ಒಗ್ಗಟ್ಟಿನ ಒತ್ತಡ: ಕಳೆದ ಎರಡು ವರ್ಷಗಳ ಹಿಂದೆಯೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತದ ಮೂಲಕ ಸುಮಾರು 900 ಕೋಟಿ ರು.ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುದಾನಕ್ಕಾಗಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
ಆದರೆ, ಈ ಬಗ್ಗೆ ಯಾವುದೇ ಫಲಶೃತಿ ಕಾಣುತ್ತಿಲ್ಲ, ಎತ್ತಿನಹೊಳೆ ಯೋಜನೆ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಬೇಕಾದರೆ ರಾಜ್ಯ ಸರ್ಕಾರ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಲ್ಲಿ 900 ಕೋಟಿ ರು.ಗಳನ್ನು ತಂದು ಆದಷ್ಟು ಬೇಗನೆ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ಅವಕಾಶಗಳಿವೆ.
ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿರುವುದರಿಂದ ರಾಜ್ಯ ಸರ್ಕಾರ ಕೇಂದ್ರದ ಸಹಕಾರದಿಂದ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸಿ, ಅಗಷ್ಟು ಬೇಗನೆ ಎತ್ತಿನ ಹೊಳೆ ಹಾಗೂ ಡಾ.ಪರಮಶಿವಯ್ಯ ವರದಿ ಜಾರಿಗೆ ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಫ್ಲೋರೈಡ್ ನೀರು ಸೇವನೆಯಿಂದ ಮುಕ್ತರಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ.
ಕೆರೆಗಳ ಅಭಿವೃದ್ಧಿ ಆಗದೆ ನೀರು ಸಂಗ್ರಹಣೆ ಅಸಾಧ್ಯ, ಅಂತರ್ಜಲ ವೃದ್ಧಿಗೆ ಕೆರೆಗಳು ಆಧಾರ, ಒತ್ತುವರಿ ಮಾಡಿಕೊಂಡಿರುವವರಿಗೆ ತಿಳುವಳಿಕೆ ನೀಡಿ ತೆರವು ಮಾಡಿಸಿ ಅದಷ್ಟು ಬೇಗನೆ ಕೆರೆಗಳ ಹೂಳು ತೆಗೆಯುವ ಕಾರ್ಯವನ್ನು ಕ್ರಮಬದ್ಧವಾಗಿ, ಪಾರದರ್ಶಕವಾಗಿ ಅನುಷ್ಠಾನಕ್ಕೆ ತರದಿದ್ದ ಪಕ್ಷದಲ್ಲಿ ಯಾವುದೇ ಯೋಜನೆ ಜಾರಿಗೆ ಬಂದರೂ ನೀರು ಸಿಗುವುದು ಅಸಾಧ್ಯ.
2014ರ ಸಂಕ್ರಾಂತಿ ವೇಳೆಗೆ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ಆಗುವುದಾಗಿ ಜನಪ್ರತಿನಿಧಿಗಳು ಹೇಳಿದ್ದಾರೆ. ಆದರೆ, ಬಜೆಟ್ನಲ್ಲಿ ಈ ಬಗ್ಗೆ ಚಕಾರವಿಲ್ಲ,
ಹಾಗಾಗಿ ಜನತೆಯಲ್ಲಿ ಗೊಂದಲ ಮೂಡಿದೆ, ಸರ್ಕಾರ ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕಾಗಿಯೇ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಪ್ರತ್ಯೇಕ ಕಚೇರಿಗಳನ್ನು ತೆರೆದು ಅಲ್ಲಿಗೆ ದಕ್ಷ ಅಧಿಕಾರಿಗಳು ಮತ್ತು ಇಂಜಿನಿಯರ್ಗಳನ್ನು ನೇಮಕ ಮಾಡಿ ಕೆಲಸ ಆರಂಭಿಸಿದಲ್ಲಿ ಯೋಜನೆ ಸಕಾಲಕ್ಕೆ ಮುಗಿದು, ಜನತೆಯಲ್ಲಿನ ಅನುಮಾನಗಳನ್ನು ನಿವಾರಿಸಲು ಅನುಕೂಲವಾಗುತ್ತದೆ.
ಎತ್ತಿನಹೊಳೆ ಯೋಜನೆ
ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನದ ಅವಶ್ಯಕತೆ ಇಲ್ಲ, ಗ್ರೀಡ್ಕ್ಯಾನಲ್ಗಳ ಮೂಲಕ ನೀರು ಹರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಸದರಿ ಯೋಜನೆಗೆ ಬಜೆಟ್ನಲ್ಲಿ ಈಗ ಒದಗಿಸಿರುವ 1 ಸಾವಿರ ಕೋಟಿ ರು.ನ್ನು ಸರಿಯಾಗಿ ಬಳಕೆ ಮಾಡಿದಲ್ಲಿ ಅವಧಿಗೂ ಮುನ್ನವೇ ನೀರು ಹರಿಸುವುದಕ್ಕೆ ಕಷ್ಟವಾಗದು. ಆದರೆ, ಕೆಲ ಜನರಲ್ಲಿ ಇರುವ ಅನುಮಾನ ಹೋಗಲಾಡಿಸುವುದು ಸರ್ಕಾರ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಗ್ರೀಡ್ಕ್ಯಾನಲ್ಗಳನ್ನು ಯಾವ ರೀತಿ ನಿರ್ಮಿಸಲಾಗುತ್ತದೆ. ಕೆರೆಗಳಿಗೆ ನೀರು ಹರಿಸಲು ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಜನತೆ ಅತ್ಯಂತ ಉತ್ಸಾಹ ಹಾಗೂ ಕುತೂಹಲದಿಂದ ಕಾಯುತ್ತಿರುವುದರಿಂದ ಜಲ ಸಂಪನ್ಮೂಲ ಇಲಾಖೆಯು ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರ ಜತೆಗೆ ಕೆರೆಗಳ ಹೂಳೇತ್ತುವ ಯೋಜನೆಗೆ ಶೀಘ್ರ ಚಾಲನೆ ನೀಡದಿದ್ದಲ್ಲಿ ಇನ್ನಷ್ಟು ಒತ್ತುವರಿಯಾಗಿ ಕಾನೂನು ತೊಡಕುಗಳು ಎದುರಿಸಬೇಕಾಗುವುದರಿಂದ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಸಹ ಆದಷ್ಟು ಬೇಗನೆ ರಚನೆ ಮಾಡಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡದಿದ್ದ ಪಕ್ಷದಲ್ಲಿ ಎತ್ತಿನ ಹೊಳೆಯ ನೀರು ಜನತೆಯ ಉಪಯೋಗಕ್ಕೆ ಸಮಸ್ಯೆ ಆಗಬಹುದು.
ಪಾ.ಶ್ರೀ. ಅನಂತರಾಮ್