ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರಮಶಿವಯ್ಯ ವರದಿ ಜಾರಿಗೆ ಹೋರಾಟ

Mainashree
Updated On : 14 Jul 2013, 11:11 am

ಕ.ಪ್ರ.ವಾರ್ತೆ, ಕೋಲಾರ, ಜು.14
ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಎತ್ತಿನ ಹೊಳೆ ಮೂಲಕ ನೀರು ಹರಿಸಲು ನಡೆಸಿರುವ ಪ್ರಯತ್ನಕ್ಕೆ ವಿರೋಧ ಬೇಡ, ಎತ್ತಿನಹೊಳೆ ಯೋಜನೆಯ ಜತೆಗೆ ಡಾ.ಪರಮಶಿವಯ್ಯ ವರದಿಯನ್ನು ಅನುಷ್ಟಾನಕ್ಕೆ ತರಲು ಸಂಘಟಿತ ಹೋರಾಟ ಮುಂದುವರೆಸೋಣ ಎಂದು ಪರಿಸರವಾದಿ ಚೌಡಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಅರಿವು ಸಂಪರ್ಕದಿಂದ ಹಮ್ಮಿಕೊಂಡಿದ್ದ ಶಾಶ್ವತ ನೀರಾವರಿ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಶ್ವಿಮಘಟ್ಟದಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ.  ಇದನ್ನು ಗ್ರೀಡ್ ಕಾಲುವೆಗಳ ಮೂಲಕ ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಲು ನೀರಾವರಿ ತಜ್ಞ ಡಾ.ಪರಮಶಿವಯ್ಯ ಸರ್ಕಾರಕ್ಕೆ ನೀಡಿರುವ ವರದಿ ಜಾರಿಗೆ ತಂದರೆ ಶಾಶ್ವತ ಪರಿಹಾರ ಸಿಗುವುದರಿಂದ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಹೊರಗಡೆ ವಿವಿಧ ಸಂಘ ಸಂಸ್ಥೆಗಳು ಸಂಘಟಿತ ಹೋರಾಟ ನಡೆಸಿದರೆ ಯೋಜನೆ ಅನುಷ್ಟಾನಕ್ಕೆ ಕಷ್ಟವಾಗುವುದಿಲ್ಲವೆಂದು ಹೇಳಿದರು.
ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಾಸ್ತವಾಂಶ ತಿಳಿಸಿದಲ್ಲಿ ಪರಮಶಿವಯ್ಯ ವರದಿಯನ್ವಯ ಪಶ್ಚಿಮಘಟ್ಟಗಳಿಂದ ಬಯಲುಸೀಮೆಗೆ ನೀರುಹರಿಸಲು ಕ್ರಮ ಜರುಗಿಸಬಹುದೆಂಬ ಚೌಡಪ್ಪ, ಆದರೆ ಎತ್ತಿನಹೊಳೆಗೆ ವಿರೋಧ ಬೇಡ ವ್ಯಕ್ತವಾದಲ್ಲಿ ಯಾವುದೇ ಯೋಜನೆ ಜಾರಿಗೆ ಮತ್ತಷ್ಟು ವಿಳಂಬವಾಗುವುದೆಂದರು. ರಾಜ್ಯದಲ್ಲಿ ಅತಿ ಹೆಚ್ಚು ಅಂತರ್ಜಲ ನಂಬಿ ಕೃಷಿ ಮಾಡುತ್ತಿರುವ ಏಕೈಕ ಜಿಲ್ಲೆ ಕೋಲಾರವಾಗಿದೆ. 1985ರಲ್ಲಿ 12 ನದಿಗಳ ವ್ಯಾಪ್ತಿಯಲ್ಲಿ 60 ಸಾವಿರ ಬಾವಿಗಳು, 4300 ಕೆರೆಗಳು ಇದ್ದವು. ಆದರೆ ಈಗ ಬಾವಿಗಳು ಮಾತ್ರವಲ್ಲ ಕೆರೆಗಳು ಸಹ ಮಾಯವಾಗಿವೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರುವ ಮುನ್ನ ಕೆರೆಗಳು ಮತ್ತು ಬಾವಿಗಳ ಪುನಶ್ಚೇತನವಾಗದಿದ್ದರೆ ಪ್ರಯೋಜನವಾಗುವುದಿಲ್ಲ ಎಂದರು.
ರಾಜ್ಯದ 28 ಜಿಲ್ಲೆಗಳಲ್ಲಿ ಸಣ್ಣ-ಮಧ್ಯಮ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಯೋಜನೆಗಳಿಲ್ಲ ಎಂದು ವಿಷಾಧಿಸಿದ ಅವರು, ದೇಶದಲ್ಲಿ 74 ಸಾವಿರ ಟಿಎಂಸಿ ಜಲಸಂಪತ್ತು ಇದೆ. ಈ ಪೈಕಿ ಕೇವಲ 24 ಟಿಎಂಸಿ ನೀರು ಬಳಕೆಯಾಗಿ ಉಳಿದ 50 ಟಿಎಂಸಿ ನೀರು ಸಮುದ್ರ ಸೇರುತ್ತಿದೆ ಎಂದು ಅಂಕಿ-ಅಂಶ ನೀಡಿದರು.
12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಸರ್ಕಾರ 44 ಲಕ್ಷ ಕೋಟಿಗಳಲ್ಲಿ 4,66,880 ಕೋಟಿ  ನೀರಾವರಿಗೆ ಮೀಸಲಿಟ್ಟಿದೆ. ಆದರೆ, ದೇಶದ ಕೆಲವು ರಾಜ್ಯಗಳಿಗೆ ಹೆಚ್ಚಿನ ನೀರಾವರಿ ಯೋಜನೆಗಳು ಅಗತ್ಯವೇ ಇಲ್ಲ, ನೀರಾವರಿ ಸೌಲಭ್ಯದ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಸ್ಯೆ ನಿವಾರಣೆ ಮಾಡಬೇಕಾಗಿದ್ದು ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ ಎಂದರು.
ಬಜೆಟ್‌ನಲ್ಲಿ ಕೃಷ್ಣಾ ಮತ್ತು ಕಾವೇರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, 2 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬಯಲುಸೀಮೆ ಜಿಲ್ಲೆಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಸರ್ಕಾರ ಕಾಳಜಿ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ.ಪರಮಶಿವಯ್ಯ ವರದಿಯನ್ನು ಸರ್ವೇ ಮಾಡಿಸಿ 13 ವರ್ಷಗಳಾಗಿದೆ. ಕಳೆದ 8 ತಿಂಗಳ ಹಿಂದಷ್ಟೇ ಆಗಿನ ಸರ್ಕಾರ ವರದಿ ತರಿಸಿಕೊಂಡಿದೆ. ಇದು ಪರಿಸರ ಸ್ನೇಹಿ ಯೋಜನೆಯಾಗಿದ್ದು, ಸಕಲೇಶಪುರದವರೆಗೆ ಪಶ್ವಿಮಘಟ್ಟಗಳಿಂದ ಹರಿಯಲು ನೀರು ಸಂಗ್ರಹಣೆ ಮಾಡಿ ಕಾಲುವೆಗಳ ಮೂಲಕ ನೀರು ಹರಿಸಿದಲ್ಲಿ ಬಯಲುಸೀಮೆಯ 6 ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸಲು 334 ಟಿಎಂಸಿ ನೀರು ಸಾಕಾಗುತ್ತದೆ ಎಂದು ಮಾಹಿತಿ ನೀಡಿದರು.
ಪರಮಶಿವಯ್ಯ ವರದಿ ಜಾರಿಯಿಂದಾಗಿ ಈ ಭಾಗದ 8300 ಕೆರೆಗಳು ತುಂಬುತ್ತದೆ. 18 ಜೀವ ನದಿಗಳಾಗುತ್ತದೆ. ಸುಮಾರು 1 ಸಾವಿರ ಮೆಗಾವಾಟ್ ವಿದ್ಯುತ್ ಉಳಿಯುತ್ತದೆ. 26 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಈ ಮೂಲಕ ಪ್ರತಿವರ್ಷ 26000 ಕೋಟಿ ಆರ್ಥಿಕ ವರಮಾನ ಸರ್ಕಾರಕ್ಕೆ ಸಿಗುತ್ತದೆ ಎಂದು ವಿವರಿಸಿದರು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜನತೆಯನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯ ಬಜೆಟ್‌ನಲ್ಲಿ ಎತ್ತಿನಹೊಳೆಗೆ 1000 ಕೋಟಿ ಮೀಸಲಿಟ್ಟಿದ್ದಾರೆ. ಎತ್ತಿನಹೊಳೆಗೆ ವಿರೋಧ ಬೇಡ. ಆದರೆ, ಪೈಪ್‌ಲೈನ್ ಮೂಲಕ ಬೇಡ, ಕಾಲುವೆ ಮೂಲಕವೇ ನೀರು ಹರಿಸಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳಿಗೆ ಯೋಜನೆ ಬಗ್ಗೆ ಇನ್ನು ಮನದಟ್ಟಾಗಿಲ್ಲ. ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ನಿಯೋಗ ತೆರಳಿ ಒತ್ತಡ ಹೇರೋಣ. ಅಗತ್ಯಬಿದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸೋಣ. ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಗ್ರಾಮದಲ್ಲಿ ಜನಾಂದೋಲನವಾಗಬೇಕು ಎಂದು ಕರೆ ನೀಡಿದರು.
ಶಾಶ್ವತ ನೀರಾವರಿಗಾಗಿ ಈಗಾಗಲೇ ಹತ್ತಾರು ಸಭೆಗಳು ನಡೆದಿದೆ. ಈ ಸಭೆಗಳು ಮತ್ತು ಹೋರಾಟಗಳು ಹೆಚ್ಚಿನ ಪರಿಣಾಮ ಬೀರಿಲ್ಲ. ಚುನಾವಣೆಗಳ ಸಮಯದಲ್ಲಿ ನೀರಾವರಿ ವಿಚಾರವಾಗಿ ಪ್ರತಿಪಾದನೆಗಳು ನಡೆದಿರುವುದರಿಂದ ನ್ಯಾಯ ಸಿಗುತ್ತಿಲ್ಲ ಎಂದು ರೈತ ಸಂಘದ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್ ದೂರಿದರೆ, ರೈತ ಸಂಘದ ಮತ್ತೊಬ್ಬ ಮುಖಂಡ ಮಾಲೂರು ಅಶ್ವತ್ಥರೆಡ್ಡಿ, ಮುಂದೆ ನಡೆಯಲಿರುವ ಲೋಕಸಭೆ ಚುನಾವಣೆಗಾಗಿ ಶಾಶ್ವತ ನೀರಾವರಿ ಹೋರಾಟ ಮುಂದುವರಿಸಲು ಹುನ್ನಾರ ನಡೆಯುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವುದರಿಂದ ಸಂಘ ಸಂಸ್ಥೆಗಳು ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಬೇಕಾಗಿದೆ ಎಂದರು. ಶ್ರೀನಿವಾಸಪುರದಲ್ಲಿ ಮಾವು ವಹಿವಾಟು ಸಂಬಂಧ ತಾವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದರಿಂದ ಸ್ವಲ್ಪಮಟ್ಟಿಗೆ ಯಶಸ್ಸು ಸಿಕ್ಕಿದೆ. ಅದೇ ರೀತಿ ನೀರಾವರಿ ವಿಚಾರದಲ್ಲೂ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಚಿಂತನೆ ನಡೆಸಿರುವುದಾಗಿ ವಕೀಲ ಶಿವಪ್ರಕಾಶಶ್ತಿಳಿಸಿದರು.
ಅರಿವು ಸಂಪರ್ಕದ ಪಿ.ಎಸ್.ರೆಡ್ಡಿ, ರೈತ ಮುಖಂಡರಾದ ಕೆ.ಶ್ರೀನಿವಾಸಗೌಡ, ಅಬ್ಬಣಿ ಶಿವಪ್ಪ, ಜಯಕರ್ನಾಟಕ ಸಂಘಟನೆಯ ರಾಜಣ್ಣ, ನಾರಾಯಣಪ್ಪ, ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್, ಮುಜೀರ್ ಪಾಷ, ವೆಂಕಟಪ್ಪ, ಕೋಟಗಾನಹಳ್ಳಿ ಗಣೇಶ್ ಇನ್ನಿತರರು ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement