ಬಂಗಾರಪೇಟೆ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರ!
ಬಂಗಾರಪೇಟೆ: ಕ್ಷೇತ್ರವನ್ನು ಕಳೆದ 8 ವರ್ಷಗಳಿಂದ ಎಡೆಬಿಡದೆ ಬರ ಕಾಡುತ್ತಿದೆ. ಇದರಿಂದ ಜನರು ನಾನಾ ಸಂಕಷ್ಟಗಳಿಗೆ ಸಿಲುಕಿದ್ದರೂ ಬರಪೀಡಿತ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಸರ್ಕಾರ ಕೈಗೊಳ್ಳದೆ ಬರೀ ಹೆಸರಿಗೆ ಮಾತ್ರ ಬರಪೀಡಿತ ಕ್ಷೇತ್ರ ಎಂದು ಘೋಷಣೆಗೆ ಮಾತ್ರ ಸೀಮಿತವಾಗಿದೆ.
ಬರ ಪರಿಣಾಮದಿಂದ ಕುಡಿಯುವ ನೀರಿಗೆ ಇನ್ನಿಲ್ಲದಂತೆ ಹಾಹಾಕಾರವಾಗಿದೆ. ಪಟ್ಟಣ ಪ್ರದೇಶದಲ್ಲಿ ಹಣ ಕೊಟ್ಟರೂ ಸಕಾಲಕ್ಕೆ ನೀರು ಲಭ್ಯವಾಗುತ್ತಿಲ್ಲ. ಖಾಸಗಿ ಟ್ಯಾಂಕರ್ ಮಾಲಿಕರಿಗೆ ವಾರಕ್ಕೆ ಮುನ್ನವೇ ಬುಕ್ಕಿಂಗ್ ಮಾಡಬೇಕು ಅಷ್ಟರಮಟ್ಟಿಗೆ ನೀರಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಪುರಸಭೆ 4 ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಿದರೆ ಅದೇ ಪುಣ್ಯ ಎಂಬಂತಾಗಿದೆ. ಪ್ರತಿದಿನ ಮಹಿಳೆಯರಿಗೆ ನೀರು ಸಂಗ್ರಹಿಸುವುದೇ ಒಂದು ಉದ್ಯೋಗವಾಗಿದೆ.
ಇನ್ನು ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಪಟ್ಟಣ ಪ್ರದೇಶಗಳಿಗಿಂತಲೂ ಭಿನ್ನವೇನಲ್ಲ.
ಇಲ್ಲಿಯೂ ಗ್ರಾಮಸ್ಥರು ನಾನಾ ಅವ್ಯವಸ್ಥೆ ಅನುಭವಿಸುತ್ತಿದ್ದಾರೆ. ಮನುಷ್ಯರೇನೋ ಹಣ ಕೊಟ್ಟು ನೀರು ಖರೀದಿಸಿ ದಾಹ ತಣಿಸಿಕೊಳ್ಳುವರು. ಆದರೆ, ಜಾನುವಾರುಗಳ ಪಾಡೇನು? ಈ ಹಿಂದೆ ಕುಂಟೆಗಳಲ್ಲಿ ಸಮೃದ್ಧವಾಗಿ ನೀರು ಸಿಗುತ್ತಿತ್ತು. ಈಗ ಕುಂಟೆಗಳು ಮಾಯವಾಗಿವೆ. ಮೇವು ಲಭ್ಯವಾಗದೆ ಜಾನುವಾರುಗಳ ಮಾಲೀಕರು ಅವುಗಳನ್ನು ಪೋಷಣೆ ಮಾಡಲಾಗದೆ ಸಂತೆಗಳಲ್ಲಿ ಮಾರಾಟ ಮಾಡುವಂತಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರವನ್ನು ಬರಪೀಡಿತ ಕ್ಷೇತ್ರ ಎಂದು ಘೋಷಣೆ ಮಾಡುವ ಮುಹೂರ್ತ ಮಾಡಲಾಗಿದೆ.
ಮುಖ್ಯಮಂತ್ರಿಯಿಂದ ಹಿಡಿದು ಕೆಲ ಸಚಿವರು ಕ್ಷೇತ್ರ ಪ್ರದಕ್ಷಿಣೆ ಮಾಡಿ ಹೋದರೆ ವಿನಃ ಯಾವುದೇ ಉಪಯೋಗವಾಗಿಲ್ಲ. ಅಂದಿನಿಂದ ಯಾವುದೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿಲ್ಲ. ಇದರಿಂದ ನೊಂದಿರುವ ಕೃಷಿ ಕೂಲಿ ಕಾರ್ಮಿಕರು ಮಾಡಲು ಕೆಲಸವಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ನಗರ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದೆ.
ಮಳೆ 8 ವರ್ಷಗಳಿಂದ ಕೈ ಕೊಡುತ್ತಲೆ ಬಂದಿದೆ. ಇದರಿಂದ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳೂ ಸ್ಥಗಿತಗೊಂಡಿದೆ. ಕೂಲಿ ಕಾರ್ಮಿಕರ ವಲಸೆ ತಡೆಯುವ ಪ್ರಯತ್ನ ಸರ್ಕಾರ ಮಾಡಿಲ್ಲ. ಗೋಬ್ಯಾಂಕ್ ತೆರಯುವುದಾಗಿ ಸರ್ಕಾರ ಹೇಳಿತ್ತಾದರೂ ಇದುವರೆಗೂ ಯಾವುದೂ ಪೂರೈಕೆಯಾಗಿಲ್ಲ. ಕಳೆದ ತಿಂಗಳು ಬಿದ್ದ ಮುಂಗಾರು ಮಳೆ ಆಶಾದಾಯಕವಾಗಿತ್ತು. ಆದರೆ, ಮತ್ತೆ ಮಳೆ ಮಾಯವಾಗಿದೆ. ಇದರಿಂದ ಮತ್ತೆ ಜನರಲ್ಲಿ ಆತಂಕದ ಛಾಯೆ ಮೂಡಿದೆ. ರಾಜ್ಯದ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಆದರೆ, ಜಿಲ್ಲೆಯ ಮೇಲೇಕೋ ವರುಣ ದೇವರು ಮುನಿಸಿಕೊಂಡಂತಿದೆ.
ಈಗ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದಿದೆ. ಈ ಸರ್ಕಾರವಾದರೂ ಕ್ಷೇತ್ರದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡು ಕೂಲಿ ಕಾರ್ಮಿಕರಿಗೆ ನೆರವಾಗಬೇಕಿದೆ. ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರನ್ನು ಪಾರು ಮಾಡಲು ಮುಂದಾಗಿ ಎಲ್ಲಾ ಕಡೆ ಹೊಸ ಬೋರ್‌ಗಳನ್ನು ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಆದರೆ ಅಂತರ್ಜಲ ಕುಸಿದಿರುವುದರಿಂದ ಇದು ಫಲ ನೀಡುತ್ತಿಲ್ಲ. ಶಾಶ್ವತ ನೀರಾವರಿ ಯೋಜನೆಗೆ ಒತ್ತು ಕೊಟ್ಟರೆ ಎಲ್ಲಾ ಸಮಸ್ಯೆಗಳು ತಾನಾಗೇ ಬಗೆ ಬಗೆಹರಿಯಲಿದೆ.
ಶಾಸಕರು ಪ್ರಾರಂಭದಲ್ಲಿ ಜನರಲ್ಲಿ ಕ್ಷೇತ್ರವನ್ನು ಬದಲಾವಣೆ ಮಾಡುವರು ಎಂಬ ಆಶಾ ಭಾವನೆ ಮೂಡಿಸಿದ್ದಾರೆ. ಇದು ಬರೀ ಆರಂಭ ಶೂರತ್ವವಾಗಿ ಉಳಿಯದೇ ಕಾರ್ಯಗತವಾಗಿಸಿ, ಸಾಧನೆ ತೋರಿಸಬೇಕಿದೆ ಎಂಬುದು ಜನರ ಆಸೆ.
ಕೆ. ರಮೇಶ್