ಸುದ್ದಿ ಸಂಕ್ಷೇಪ
ರೈತರ ಮೇಲೆ ಲಾಠಿ ಪ್ರಹಾರಕ್ಕೆ ಖಂಡನೆ
ಕೋಲಾರ: ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ಲಾಠಿ ಪ್ರಹಾರವನ್ನು ಕೋಲಾರ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ನಾರಾಯಣಗೌಡ ಖಂಡಿಸಿದ್ದಾರೆ.ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಎಪಿಎಂಸಿ ಅಧಿಕಾರಿಗಳು ಮತ್ತು ದಲ್ಲಾಳಿಗಳ ಕುಮ್ಮಕ್ಕಿನಿಂದ ಪೊಲೀಸರು ಅಮಾಯಕ ರೈತರ ಮೇಲೆ ದೌರ್ಜನ್ಯ ಎಸಗಿರುವುದು ಸರಿಯಲ್ಲ. ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ರೈಲಿನಿಂದ ಬಿದ್ದು ವ್ಯಕ್ತಿ ಸಾವು
ಮಾಲೂರು: ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದ ವ್ಯಕ್ತಿ ರೈಲಿನ ಗಾಲಿಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತನನ್ನು ಕೆ.ಆರ್.ಪುರಂ ನಿವಾಸಿ ಪ್ರಭು (40) ಎಂದು ಗುರುತಿಸಲಾಗಿದೆ. ಬೆಳಗ್ಗೆ ತಮ್ಮ ಹೆಂಡತಿ ಹಾಗೂ ಮಕ್ಕಳನ್ನು ಕೆಜಿಎಫ್‌ನ ತವರು ಮನೆಗೆ ಕಳುಹಿಸಿದ್ದ ಪ್ರಭು ಅವರು, ತಮ್ಮ ಪಾಳಿಯ ಕೆಲಸ ಮುಗಿಸಿ ಕೆಜಿಎಫ್‌ಗೆ ಜೋಲಾರ್ ರೈಲಿನಲ್ಲಿ ಹೊರಟಿದ್ದರು. ಇ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದಾಗ ಈ ಘಟನೆ ಸಂಭವಿಸಿದೆ. ರೇಲ್ವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಪ್ರವಾಸದಿಂದ ಮಾನಸಿಕ ನೆಮ್ಮದಿ'
ಟೇಕಲ್: ಮಾನಸಿಕ ನೆಮ್ಮದಿ ಮನೋಲ್ಲಾಸಕ್ಕಾಗಿ ಮನುಷ್ಯ ಬೇರೆ ಸ್ಥಳಗಳನ್ನು ವೀಕ್ಷಿಸಿದಾಗ ಮನಸ್ಸಿನ ಏರಿಳಿತಗಳು ತಹಬದಿಗೆ ಬರುತ್ತವೆ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಮಾಜಿ ತಾಪಂ ಅಧ್ಯಕ್ಷ, ಜೆಡಿಎಸ್ ಮುಖಂಡ ಕೆ.ವೈ. ನಂಜೇಗೌಡರು ಹೇಳಿದರು.