ಕಾನೂನು ಕಾಲೇಜಿಗೆ ಮೂಲ ಸೌಕರ್ಯಕ್ಕೆ ಒತ್ತಾಯ
ಕ.ಪ್ರ.ವಾರ್ತೆ ಕೋಲಾರ ಜು.15
ನಗರದ ಹೊರವಲಯದಲ್ಲಿನ ಅರಹಳ್ಳಿಯಲ್ಲಿರುವ ಸರ್ಕಾರಿ ಕಾನೂನು ಕಾಲೇಜು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಕನಿಷ್ಠ ಕುಡಿಯಲು ನೀರು, ಉತ್ತಮವಾದ ಶೌಚಾಲಯ, ಸಾರಿಗೆ ವ್ಯವಸ್ಥೆ ಇಲ್ಲ. ವ್ಯವಸ್ಥೆ ಕಲ್ಪಿಸುವಂತೆ ಕಾಲೇಜು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಹತ್ತಾರು ಬಾರಿ ಬೇಡಿಕೆ ಈಡೇರಿಸುವಂತೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ, ಜಿಲ್ಲಾ ಆಡಳಿತ ಮತ್ತು ಕಾನೂನು ಕಾಲೇಜಿನ ಆಡಳಿತ ಮಂಡಳಿಯು ಸಮಸ್ಯೆ ನಿವಾರಣೆ ಮಾಡಲು ವಿಫಲವಾಗಿರುವುದರಿಂದ ವಿದ್ಯಾರ್ಥಿಗಳು ಈಗ ಮಾಧ್ಯಮದ ಮೊರೆ ಹೋಗಿದ್ದಾರೆ. ಕುಡಿಯಲು ನೀರು, ಶೌಚಾಲಯದ ಸಮಸ್ಯೆಯಿಂದ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಶೀಘ್ರ ಪರಿಹಾರ, ಕಾಲೇಜಿನ ಬಳಿ ಸರ್ಕಾರಿ ಬಸ್ಸುಗಳ ನಿಲುಗಡೆಗೆ ಕ್ರಮ ಹಾಗೂ ಕ್ಯಾಂಟೀನ್ ವ್ಯವಸ್ಥೆ ಮಾಡುವಂತೆ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಗೋಪಿನಾಥ್ ಮತ್ತು ಭಗವತ್ ವರ್ಮ ಆಗ್ರಹಿಸಿದ್ದಾರೆ.
ಕಾನೂನು ಕಾಲೇಜಿನ ಅವ್ಯವಸ್ಥೆಯನ್ನು ಸೋಮವಾರ ಸುದ್ದಿಗಾರರಿಗೆ ವಿವರಿಸಿದ ಈ ವಿದ್ಯಾರ್ಥಿಗಳು, 250 ಮಂದಿ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಕಾನೂನು ಕಾಲೇಜಿಗೆ ಕನಿಷ್ಟ ಮೂಲ ಸೌಕರ್ಯಗಳು ಇಲ್ಲದಿರುವುದು ಶೋಚನಿಯವೆಂದು ಟೀಕಿಸಿ, ಅದಷ್ಟು ಬೇಗನೆ ಕಾಲೇಜಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಗಡುವು ನೀಡಿದ್ದಾರೆ.
ಕಾನೂನು ಕಾಲೇಜಿನಲ್ಲಿ ಸುಸಜ್ಜಿತವಾದ ಗ್ರಂಥಾಲಯ, ಅಣಕು ನ್ಯಾಯಾಲಯ, ಸೆಮಿನಾರ್ ಹಾಲ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಕೋಲಾರದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯವಿಲ್ಲ. ಸರ್ಕಾರಿ ಬಸ್ಸುಗಳನ್ನು ಕಾಲೇಜಿನ ಬಳಿ ನಿಲ್ಲಿಸದಿರುವುದರಿಂದ ಸಕಾಲಕ್ಕೆ ತರಗತಿಗಳಿಗೆ ಹಾಜರಾಗುವುದಕ್ಕೆ ಸಮಸ್ಯೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಒಪ್ಪಿಕೊಂಡ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಅನಿತಾ ಅವರು, ಹಂತ ಹಂತವಾಗಿ ಸಮಸ್ಯೆ ನಿವಾರಿಸುವುದಾಗಿ ಹೇಳಿದರು.
ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಸ್ಥಳೀಯ ಪರಿಶೀಲನಾ ಸಮಿತಿಯ ಅಧಿಕಾರಿಗಳು ಅಣುಕು ನ್ಯಾಯಾಲಯ, ಗ್ರಂಥಾಲಯವನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅಗತ್ಯ ಸೌಕರ್ಯಗಳು ಕಲ್ಪಿಸಲು ಆಗದಿದ್ದರೆ ಕಾಲೇಜಿಗೆ ಪ್ರವೇಶ ನಿಲ್ಲಿಸುವಂತೆ ಸೂಚಿಸಿರುವುದರಿಂದ ನಾವು ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.
ನೀರಿನ ಸಮಸ್ಯೆ ಇರುವುದರಿಂದ ಖಾಸಗಿಯವರಿಂದ ನೀರು ಪಡೆಯಲಾಗುತ್ತಿದೆ. ಸರ್ಕಾರ ನೀಡುವ ಅನುದಾನದಲ್ಲೇ ಎಲ್ಲ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಬೇಡಿಕೆಗಳು ಸಂಪೂರ್ಣವಾಗಿ ಈಡೇರಿಸಲು ಆಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ದೂರದೃಷ್ಟಿ ಇಲ್ಲದೆ ಕಾಲೇಜನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಿರುವುದರಿಂದ ಈಗ ಅದರ ಪರಿಣಾಮ ಎದುರಿಸಲಾಗುತ್ತಿದೆ ಎಂದು ಪ್ರಭಾರಿ ಪ್ರಾಂಶುಪಾಲರಾದ ಅನಿತಾ ತಿಳಿಸಿದರು. ಪ್ರಾಂಶುಪಾಲರೇ ಅನೇಕ ಸಮಸ್ಯೆಗಳನ್ನು ತಿಳಿಸಿದ್ದರಿಂದ ವಿದ್ಯಾರ್ಥಿಗಳು ಮತ್ತಷ್ಟು ಆಕ್ರೋಶಗೊಂಡು, ಕಾಲೇಜಿನ ಸಮಸ್ಯೆಗಳನ್ನು ಕೂಡಲೇ ಸರ್ಕಾರದ ಗಮನಕ್ಕೆ ತರಬೇಕು, ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಪರಿಹಾರ ಪಡೆಯಲು ಯತ್ನಿಸಬೇಕೆಂದು ಒತ್ತಾಯಿಸಿದರು.