ಜನ್ನಘಟ್ಟದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ
ಕೋಲಾರ: ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಲೋಕ ಕಲ್ಯಾಣಕ್ಕಾಗಿ ಆಯೋಜಿಸಿದ್ದಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಲ್ಯಾಣೋತ್ಸವದಲ್ಲಿ ತಿರುಪತಿಯ ಮಾದರಿಯಲ್ಲೇ ಮಂಟಪಗಳನ್ನು ನಿರ್ಮಿಸಿ ತಿರುಮಲದಿಂದಲೇ ಶ್ರೀನಿವಾಸ- ಪದ್ಮಾವತಿಯ ಮೂರ್ತಿಗಳನ್ನು ತರಿಸಿ ಪೂಜೆ ಸಲ್ಲಿಸಲಾಯಿತು. ಶ್ರೀನಿವಾಸ- ಪದ್ಮಾವತಿಯ ಮೂರ್ತಿಗಳಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ಆಭರಣಗಳ ಅಲಂಕಾರಗಳನ್ನು ಮಾಡಲಾಗಿತ್ತು. ತಿರುಪತಿಯ ತಿರುಮಲದಲ್ಲಿನ ಶ್ರೀನಿವಾಸನನ್ನು ಯಾವ ಅಲಂಕಾರದಲ್ಲಿ ನೋಡುತ್ತೇವೋ ಅದೇ ಅಲಂಕಾರವನ್ನು ಇಲ್ಲೂ ಮಾಡಲಾಗಿತ್ತು. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಜಿಲ್ಲೆಯ ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ಲೋಕ ಕಲ್ಯಾಣಕ್ಕಾಗಿ ಹಾಗೂ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಜಿ.ಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಟಿ.ವಿ.ಕೃಷ್ಣಪ್ಪ, ಟಿ.ವಿ. ತಿಮ್ಮರಾಯಪ್ಪ ಕುಟುಂಬದವರು ಹಾಗೂ ಗ್ರಾಮಸ್ಥರು ಸೇರಿ ಈ ಕಲ್ಯಾಣೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಬೆಂಗಳೂರಿನ ಶ್ರೀವಾರಿ ಫೌಂಡೇಷನ್ನ ಎಸ್.ವೆಂಕಟೇಶಮೂರ್ತಿ ಇದರ ಉಸ್ತುವಾರಿ ವಹಿಸಿದ್ದರು.