ಪ್ರಾಂಶುಪಾಲ ಅತ್ತಾರ್, ಉಪನ್ಯಾಸಕ ನಾಗರಾಜ್ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ ಮಾಲೂರು ಜು. 15
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅತ್ತಾರ್ ಹುಸೇನ್ ಫರೋಖಿ ಹಾಗೂ ಉಪನ್ಯಾಸಕ ಡಾ.ಎಂ.ನಾಗರಾಜ್ರವರ ವರ್ಗಾವಣೆ ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಸಹಕಾರದಲ್ಲಿ ಕಾಲೇಜಿನ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಲಕ್ಕೂರು ನಾಗರಾಜ್, ಕಾಲೇಜು ಪ್ರಾರಂಭವಾಗಿ 25 ವರ್ಷ ಕಳೆದಿದ್ದರೂ ಇಲ್ಲಿಯವೆರಗೂ ಕಾಣದಿದ್ದ ಕಾಲೇಜು ಅಭಿವೃದ್ಧಿ ಪ್ರಾಂಶುಪಾಲ ಫರೋಖಿ ರವರ 3 ವರ್ಷದ ಆಡಳಿತವಾಧಿಯಲ್ಲಿ ಆಗಿದೆ. ಫರೋಖಿ ಹಾಗೂ ಉಪನ್ಯಾಸಕ ಡಾ.ನಾಗರಾಜ್ ರವರಿಂದ ಕಾಲೇಜು ಶೈಕ್ಷಣಿಕ ಮಟ್ಟ ಹೆಚ್ಚುತ್ತಿರುವಾಗ ಇವರನ್ನು ವಿದ್ಯಾರ್ಥಿಗಳ ಆಶಯಕ್ಕೆ ಅಡ್ಡಿಯಾಗುವಂತೆ ವರ್ಗಾವಣೆ ಮಾಡಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಇವರ ವರ್ಗಾವಣೆಯನ್ನು ರದ್ದುಪಡಿಸಿ, ಈ ಕಾಲೇಜಿನಲ್ಲೇ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕೆಂದು ಅಗ್ರಹಿಸಿದರು.
ಕಾಲೇಜು ಆಡಳಿತ ಮಂಡಳಿಗೆ ಮನವಿ ಪತ್ರ ನೀಡಿದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ರವರಿಗೆ ಮನವಿ ಪತ್ರ ಅರ್ಪಿಸಿದರು.