ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬೆಂಗಳೂರಿನ ಕೊಳಚೆ ನೀರು ಮಾಲೂರಿಗೆ ಶೀಘ್ರ ಚಾಲನೆ ಹಕ್ಕೊತ್ತಾಯ ಸಹಿ ಆಂದೋಲನ'

Rashmi Kasaragodu
Updated On : 16 Jul 2013, 1:26 am

ಮಾಲೂರು: ಬೆಂಗಳೂರಿನ ಕೊಳಚೆ ನೀರು(ಮುಗಳೂರು ಕಾಲುವೆ) ಮಾಲೂರು ತಾಲೂಕಿನ ಕೆರೆಗಳಿಗೆ ಹರಿಸುವ ಯೋಜನೆ ಶೀಘ್ರವಾಗಿ ಚಾಲನೆ ನೀಡಬೇಕೆಂಬ ಹಕ್ಕೊತ್ತಾಯದ ಸಹಿ ಸಂಗ್ರಹ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ರೆಡ್ಡಿ ಹೇಳಿದರು.
ಅವರು ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಲಾಗಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡುತ್ತ ತಮಿಳುನಾಡಿಗೆ ವ್ಯರ್ಥವಾಗಿ ಹರಿದುಹೋಗುತ್ತಿರುವ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಮಾಲೂರು ತಾಲೂಕಿನ ಕೆರೆಗಳಿಗೆ ಹರಿಸಲು ಹಿಂದಿನ ಜಗದೀಶ್ ಶೆಟ್ಟರ್ ಮಂತ್ರಿ ಮಂಡಲದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.
ಇಂದಿನ ಸರ್ಕಾರ ಈ ಯೋಜನೆಯ ವಿಸ್ತೃತ ವರದಿ ತಯಾರಿಸಿ ಯೋಜನಗೆ ಚಾಲನೆ ನೀಡುವಂತಹ ಕಾರ್ಯ ನಡೆಯಬೇಕಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಜೆಟ್‌ನಲ್ಲಿ ಯೋಜನೆ ಬಗ್ಗೆ ಪ್ರಸ್ತಾಪ ಮಾಡದಿರುವುದು ಬೇಸರ ತರಿಸಿದೆ ಎಂದರು.
ಇತ್ತೀಚಿನ ಮಾಹಿತಿಯಂತೆ ಕೆಐಡಿಬಿ ಇಲಾಖೆ ಮೂಲಕ ನರಸಾಪುರ ಬಳಿ ಇರುವ ಬಹುರಾಷ್ಟ್ರೀಯ ಕಂಪನಿ ಹೋಂಡಗೆ ಪೈಪು ಆಳವಡಿಸಿ ಇದೇ ಮುಗಳೂರು ಕೊಳಚೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಹರಡಿದೆ.
ಆದರೆ, ಯಾವುದೇ ಕಾರಣಕ್ಕೂ ಈ ಯೋಜನಗೆ ಅನುಮೋದನೆ ನೀಡದೆ ಮಾಲೂರು ಕೆರೆಗಳಿಗೆ ನೀರು ಹರಿಯುವ ಯೋಜನೆಗೆ ಚಾಲನೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಹಕ್ಕೊತ್ತಾಯದ ಸಹಿ ಸಂಗ್ರಹ ಆಂದೋಲನ ನಡೆಸುವುದಾಗಿ ಅವರು ಈ ವೇಳೆ ತಿಳಿಸಿದರು.
ಈ ಸಂಬಂಧ ಕೋಲಾರದ ಪತ್ರಕರ್ತರ ಭವನದಲ್ಲಿ ಚಿಕ್ಕಬಳ್ಳಾಪುರದ ಚೌಡಪ್ಪ ಅಧ್ಯಕ್ಷತೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಿರುವ ಎಲ್ಲ ಸಂಘಟನೆಗಳ ಮುಖಂಡರುಗಳ ಸಭೆ ಕರೆಯಲಾಗಿದ್ದು, ಆಂದೋಲನದ ರೂಪರೇಷೆ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ಸಭೆಯಲ್ಲಿ ಬಿಸನಹಳ್ಳಿ ಭೈಚೇಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ, ದಿನ್ನೇರಿ ಮಂಜುನಾಥ್ ಗೌಡ, ನಿದರಮಂಗಲ ನಾಗಪ್ಪ, ಮುರಳಿ ಸೇರಿದಂತೆ ಇತರೆ ರೈತ ಸಂಘ ಮುಖಂಡರುಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement