ಸಮರ್ಪಕ ಪಡಿತರ ಚೀಟಿ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
ಬಾಗೇಪಲ್ಲಿ: ಸಮರ್ಪಕವಾಗಿ ಪಡಿತರ ಚೀಟಿ ವಿತರಿಸುವಂತೆ ಆಗ್ರಹಿಸಿ ತಾಲೂಕಿನ ಪಾತಪಾಳ್ಯ ಹೋಬಳಿಯ ಕಾಂಸಾನಪಲ್ಲಿ ಗ್ರಾಮದ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮದ ಮುಖಂಡ ಚಿನ್ನ ವೆಂಕಟಸುಬ್ಬಾರೆಡ್ಡಿ, ಇತ್ತೀಚೆಗೆ ಸರಕಾರ 1 ರು.ಗೆ ಒಂದು ಕೆಜಿಯಂತೆ 30ಕೆ.ಜಿ ಅಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಿರುವ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಪಡಿತರ ಚೀಟಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅರ್ಜಿಗಳನ್ನು ಸಲ್ಲಿಸಲು ಕೆಲಸ ಕಾರ್ಯಗಳನ್ನು ಬಿಟ್ಟು ಗ್ರಾ.ಪಂ ಕಚೇರಿಯ ಸುತ್ತಲೂ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆಯಿಲ್ಲದೆ ತೀವ್ರ ಬರಗಾಲಕ್ಕೆ ತುತ್ತಾಗಿ ಈ ಭಾಗದ ಜನರು ಇತ್ತ ಬೆಳೆಯೂ ಇಲ್ಲದೆ ಅತ್ತ ಮಾಡಲು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ಸರಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ನೀಡುವ ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆ ನಂಬಿಕೊಂಡು ಈ ಭಾಗದ ಜನರು ಜೀವನ ನಡೆಸಬೇಕಾದ ಅನಿವಾರ್ಯವಿದ್ದು ಆದರೆ ಗ್ರಾ.ಪಂ. ಅಧಿಕಾರಿಗಳು, ಬೇಜವಾಬ್ದಾರಿತನದಿಂದ ಅರ್ಹ ಬಡವರಿಗೆ ಸರಿಯಾಗಿ ಪಡಿತರ ಚೀಟಿಗಳನ್ನು ವಿತರಣೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು. ಅಧಿಕಾರಿಗಳು ಪಡಿತರ ಚೀಟಿಗಳನ್ನು ಅರ್ಹ ಬಡವರಿಗೆ ವಿತರಣೆ ಮಾಡದೆ ಇರುವುದರಿಂದ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆಹಾರ ಪದಾರ್ಥಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಕೊಳ್ಳಲು ಹಣವಿಲ್ಲದೆ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಜೀವನವನ್ನು ಸಾಗಿಸಬೇಕಾದಂತಹ ಪರಿಸ್ಥಿತಿಯನ್ನು ಅಧಿಕಾರಿಗಳು ನಿರ್ಮಾಣ ಮಾಡಿದ್ದಾರೆಂದ ಅವರು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪಡಿತರ ಚೀಟಿ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಅರ್ಹ ಬಡ ಫಲಾನುಭವಿಗಳಿಗೆ ತಕ್ಷಣ ಪಡಿತರ ಚೀಟಿ ವಿತರಣೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಪಾತಪಾಳ್ಯ ಗ್ರಾ.ಪಂ. ಪಿ.ಡಿ.ಓ. ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಗೋವಿಂದಪ್ಪ, ತಕ್ಷಣ ಕ್ರಮಕೈಗೊಂಡು ಸಮರ್ಪಕ ಪಡಿತರ ಚೀಟಿ ವಿತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಶಿವಾರೆಡ್ಡಿ, ಕೃಷ್ಣಪ್ಪ , ಡೈರಿ ಗಂಗಿರೆಡ್ಡಿ, ನಾರಾಯಣರೆಡ್ಡಿ, ವೆಂಕಟರೆಡ್ಡಿ ಮತ್ತಿತರರು ಭಾಗವಹಿಸಿದ್ದರು.