ಅಸಮರ್ಪಕ ಬಸ್ ಸೇವೆ: ಎಸ್‌ಎಫ್‌ಐ ಪ್ರತಿಭಟನೆ
ಚಿಂತಾಮಣಿ: ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಘಟಕದ ವ್ಯವಸ್ಥಾಪಕರು ವಿಫಲಗೊಂಡಿದ್ದಾರೆಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಘಟಕದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಮುನೇಂದ್ರ ಮಾತನಾಡಿ, ಕುಂದಲಗುರ್ಕಿ ಗ್ರಾಮದ ಈ ಹಿಂದೆ ಇದ್ದ 77 ರೂಟ್ ಮಾದರಿಯಂತೆ ಮುಂದುವರೆಸಿ ಮತ್ತು ವೇಮಗಲ್, ಗಂಜಿಕುಂಟೆ, ಬ್ರಾಹ್ಮಣರಹಳ್ಳಿ, ಕಾಡಳ್ಳಿ, ಬಂಗಾಪುರ, ಕುಂದಲಗುರ್ಕಿ ಮಾರ್ಗವಾಗಿ ಶಿಡ್ಲಘಟ್ಟಕ್ಕೆ ಬೆಳಿಗ್ಗೆ, ಮದ್ಯಾಹ್ನ, ಸಂಜೆ ಮತ್ತು ರಾತ್ರಿ ವೇಳೆ ಸಂಚರಿಸುವಂತೆ ಬಸ್ ಬಿಡಿ.
ಚಿಂತಾಮಣಿಯಿಂದ ಕುಂದಲಗುರ್ಕಿ ಮಾರ್ಗವಾಗಿ 2 ಗಂಟೆಗೆ ಬಸ್ ಸಂಪರ್ಕ ಕಲ್ಪಿಸಿ. ಚೇಳೂರು, ಏನಿಗದಲೆ, ಕೋರ್ಲಪರ್ತಿ, ಕುಂದಲಗುರ್ಕಿ, ಶಿಡ್ಲಘಟ್ಟ, ಬೆಂಗಳೂರಿಗೆ ಬಸ್ ಸೇವೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಘಟಕದ ವ್ಯವಸ್ಥಾಪಕರ ಪರವಾಗಿ ಶ್ರೀನಿವಾಸ್ ಮಾತನಾಡಿ, ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳಾದ ವಿನಯ್, ಸುದರ್ಶನ್, ಸುನೀಲ್, ಕೃಷ್ಣಮೂರ್ತಿ, ರಾಮಕುಮಾರ್, ಇಮ್ರಾನ್, ನಾಗೇಶ್, ವಿನೋದ್‌ಕುಮಾರ್, ಸುನಿಲ್, ಸೈಫುಲ್ಲಾ, ವೆಂಕಟೇಶ್, ಅನಿಲ್‌ಕುಮಾರ್ ಸೇರಿದಂತೆ ಹಲವರಿದ್ದರು.