ಎಗ್ಗಿಲ್ಲದೆ ನಡೆದಿದೆ ಅಕ್ರಮ ಮರಳು ಲೂಟಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಜು. 16
ಜಿಲ್ಲೆಯಲ್ಲಿ ಮರಳು ಸಾಗಾಣಿಕೆಯನ್ನು ನಿಷೇಧಿಸಿದ್ದರೂ ಅಕ್ರಮವಾಗಿ ಮರಳು ನಿರಂತರವಾಗಿ ಲೂಟಿಯಾಗುತ್ತಿದೆ. ಪೊಲೀಸ್ ಮತ್ತು ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆಯ ನಿಯಂತ್ರಣದ ಬೊಗಳೆ ಮಾತುಗಳ ನಡುವೆಯೂ ದಂಧೆಕೋರರು, ಕೆರೆ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮರಳನ್ನು ರಾಜಾರೋಷವಾಗಿ ಬಗೆಯುತ್ತಿದ್ದಾರೆ.
ಇದಕ್ಕೆ ನಿದರ್ಶನ ಐತಿಹಾಸಿಕ ಸರ್.ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿರುವ, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ಏಳೆಂಟು ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮರಳು ನಿರಂತರವಾಗಿ ಲೂಟಿಯಾಗುತ್ತಿರುವುದು. ಪ್ರತಿದಿನ ಜಲಾಶಯದಲ್ಲಿ ಪರವಾನಗಿ ಹೊಂದಿರದಿದ್ದರೂ ಯಾವುದೇ ಭಯವಿಲ್ಲದೇ ದಂಧೆಕೋರರು ಅಮಾಯಕ ಕೂಲಿ ಕಾರ್ಮಿಕರಿನ್ನಿಟ್ಟುಕೊಂಡು ಮರಳನ್ನು ಟ್ರ್ಯಾಕ್ಟರುಗಳ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾರೆ.
ಎದ್ದು ಬಿದ್ದು ಓಡಿದರು: ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರುಗಳನ್ನು ಕೊಟ್ಟು ಫಲವನ್ನು ಕಾಣದಿದ್ದಾಗ ಗ್ರಾಮಸ್ಥರ ನೀಡಿದ ಮಾಹಿತಿಯನ್ವಯ ಶ್ರೀನಿವಾಸ ಸಾಗರ ಜಲಾಶಯಕ್ಕೆ ಮಾಧ್ಯಮದವರು ಹೋಗಿ ನೋಡಿದಾಗ, ಮಂಗಳವಾರ ಹತ್ತಾರು ಟ್ರ್ಯಾಕ್ಟರುಗಳಿಗೆ ಸುಮಾರು 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಅಕ್ರಮವಾಗಿ ಮರಳನ್ನು ತುಂಬಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಬರುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡ ಕೆಲ ಕೂಲಿ ಕಾರ್ಮಿಕರು, ಪೊಲೀಸರು ಹಿಡಿದುಕೊಂಡು ಬಂಧಿಸುತ್ತಾರೆ ಎಂಬ ಭೀತಿಯಲ್ಲಿ ಎದ್ದು ಬಿದ್ದು ಓಡಿದರು. ಚಾಲಕರು ಮನಸ್ಸಿಗೆ ಬಂದ ದಿಕ್ಕಿನತ್ತ ಟ್ರ್ಯಾಕ್ಟರುಗಳನ್ನು, ಜೆಸಿಬಿ ವಾಹನಗಳನ್ನು ಚಲಾಯಿಸಿಕೊಂಡು ಹೊರಟು ಬಿಟ್ಟರು. ಆತುರದಲ್ಲಿ ಮರಳನ್ನು ತೆಗೆಯಲು ಬಳಸುತ್ತಿದ್ದ ಗಡಾರಿ, ಸನಿಕೆ ಮತ್ತು ಮಕರಿಗಳನ್ನು ಸಹ ತೆಗೆದುಕೊಂಡು ಹೋಗುವುದನ್ನು ಮರೆತು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದರು. ಆದರೆ, ಜಲಾಶಯದ ಬೇರೆ ಬೇರೆ ಜಾಗದಲ್ಲಿ ಗುಂಡಿಗಳನ್ನು ಅಗೆದಂತಹ ಕುರುಹುಗಳು ಮಾತ್ರ ಸ್ಪಷ್ಟವಾಗಿ ಕಾಣುತ್ತಿದ್ದವು.
ಲೆಕ್ಕಕ್ಕೆ ಕಾರ್ಯಾಚರಣೆ:ಮರಳು ಸಾಗಾಣಿಕೆಯನ್ನು ನಿಷೇಧಿಸಿದ್ದರೂ ರಾಜಾರೋಷವಾಗಿ ಮರಳು ಲೂಟಿಯಾಗುವುದಕ್ಕೆ ಪರೋಕ್ಷವಾಗಿ ಕೆಲ ಅಧಿಕಾರಿಗಳು ನೀಡುತ್ತಿರುವ ಬೆಂಬಲವೇ ಕಾರಣವಾಗಿದೆ. ಪರವಾನಗಿಯನ್ನು ಹೊಂದಿ ಮರಳು ಸಾಗಿಸುವಂತಹವರಿಗೆ ಪ್ರತಿದಿನ ಕಿರುಕುಳ ನೀಡಿ ಅಕ್ರಮವಾಗಿ ಹಣವನ್ನು ವಸೂಲಿ ಮಾಡಿ ಜೇಬಿಗಿಳಿಸಿಕೊಳ್ಳುವಂತಹ ಕೆಲಸ ಸಹ ನಡೆಯುತ್ತಿದೆ. ಇನ್ನೂ ಲಂಚವನ್ನು ನೀಡಿ ಅಧಿಕಾರಿಗಳನ್ನು ನಿಭಾಯಿಸಲು, ಜತೆಗೆ ಬಂಡವಾಳವನ್ನು ಹಾಕದೇ ದುರಾಸೆಯಿಂದ ಲಾಭವನ್ನು ಗಳಿಸಬೇಕೆಂಬ ದುರುದ್ದೇಶದಿಂದ ಅನೇಕರು ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಇದರ ದುಷ್ಪರಿಣಾಮ ಮನೆ, ಕಟ್ಟಡಗಳನ್ನು ಕಟ್ಟಲು ಮರಳಿಗಾಗಿ ಕಾಯುವ ಮಾಲೀಕರ ಮೇಲೆ ಬೀಳುತ್ತಿದೆ. ಈ ನಡುವೆ ಅಧಿಕಾರಿಗಳು ಜನರ ದೂರುಗಳ ಹಿನ್ನೆಲೆಯಲ್ಲಿ ಕೇವಲ ಅಂಕಿ ಅಂಶಗಳ ಲೆಕ್ಕವನ್ನು ತೋರಿಸಲು ಮಾತ್ರ ಒಂದೋ ಎರಡೋ ಕಡೆ ಕಾರ್ಯಾಚರಣೆ ಕೈಗೊಂಡು ಕೈತೊಳೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಜಿಲ್ಲಾಡಳಿತ ಕುರುಡು ನಿದ್ದೆಯಲ್ಲಿದೆ.
ಸ್ಥಳಕ್ಕೆ ಬಂದ ಅಧಿಕಾರಿ: ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ತಹಶೀಲ್ದಾರ್ ನಟೇಶ್, ಶ್ರೀನಿವಾಸ ಸಾಗರ ಜಲಾಶಯದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.ಸ್ಥಳದಲ್ಲಿ ಬಿದ್ದಂತಹ ಸಲಕರಣೆಗಳನ್ನು ವಶಪಡಿಸಿಕೊಳ್ಳಲು ಸಿಬ್ಬಂದಿಗೆ ಸೂಚಿಸಿದರು. ಅಲ್ಲದೇ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟೇ ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ ಅಲ್ಲಲ್ಲಿ ಮರಳನ್ನು ಅಕ್ರಮವಾಗಿ ಸಾಗಾಣೆ ಮಾಡುವಂತಹ ದುಷ್ಕೃತ್ಯ ನಡೆಯುತ್ತಿದೆ. ಈ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಸ್ಥಳಕ್ಕೆ ಹೋದ ಸಂದರ್ಭದಲ್ಲಿ, ದಂಧೆಕೋರರು ಪರಾರಿಯಾಗುತ್ತಾರೆ. ಇವರು ಪಕ್ಕಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಒಂದೆಡೆ ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟ ಮತ್ತು ಅಸಮರ್ಪಕ ಮಳೆಯಿಂದ ನೀರಿಲ್ಲದೆ ಪರದಾಡುತ್ತಿರುವ ಬಯಲುಸೀಮೆಯ ಜನರು ಹನಿ ಹನಿ ನೀರಿಗೂ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ಮರಳನ್ನು ಸಂರಕ್ಷಿಸುವ ಬಗ್ಗೆ ಬೊಗಳೆ ಮಾತುಗಳನ್ನು ಹೇಳುತ್ತಿದ್ದಾರೆ. ಈ ನಡುವೆ, ಭೂಮಿಯ ಒಡಲಲ್ಲಿ ನೀರಿನಂಶವನ್ನು ಅಡಗಿಸಿಟ್ಟಿಕೊಳ್ಳುವ ಮರಳನ್ನು ಅಕ್ರಮ ಗಣಿಗಾರಿಕೆ ಮೂಲಕ ದಂಧೆಕೋರರು ಕೊಳ್ಳೆ ಹೊಡೆಯುತ್ತಿದ್ದಾರೆ. ಇದಕ್ಕೆ ಈಗಲಾದರೂ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿದೆ.
ಕೇವಲ ಅಂಕಿಅಂಶಗಳ ಲೆಕ್ಕವನ್ನು ತೋರಿಸುವುದಕ್ಕಾಗಿ ಕಾರ್ಯಾಚರಣೆಯನ್ನು ಕೈಗೊಳ್ಳದೇ ಅಕ್ರಮ ಮರಳು ಸಾಗಾಣಿಕೆಗೆ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿರುವ ಅಧಿಕಾರಿಗಳ ವಿರುದ್ಧ, ಜತೆಗೆ ದಂಧೆಕೋರರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.