ಕನ್ನಡಿಗರ ಉದ್ಯೋಗಕ್ಕೆ ಕರವೇ ರಣಕಹಳೆ
ಕ.ಪ್ರ.ವಾರ್ತೆ ಕೋಲಾರ ಜು. 16
ತಾಲೂಕಿನ ನರಸಾಪುರ ಕೈಗಾರಿಕೆ ಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆ ಕೈಗಾರಿಕೆಗಳನ್ನು ಸ್ಥಾಪಿಸಿರುವ ಉದ್ಯಮಿಗಳು ಕನ್ನಡಿಗರಿಗೆ ಮೊದಲು ಕಡ್ಡಾಯವಾಗಿ ಉದ್ಯೋಗಾವಕಾಶ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಹಾಗೂ ಕೋಲಾರ ಘಟಕದ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಹೋಂಡಾ ಮೋಟಾರ್ ಸೈಕಲ್‌ಮತ್ತ್ತು ಸ್ಕೂಟರ್ ಕಂಪನಿಯ ಮಾಲೀಕರು ಕಾರ್ಖಾನೆ ಸ್ಥಾಪನೆಗೆ ಮುಂಚೆ ಸ್ಥಳೀಯರಿಗೆ ಶೇ. 85 ರಷ್ಟು ಉದ್ಯೋಗಾವಕಾಶ ನೀಡುವುದಾಗಿ ಮತ್ತು ಭೂಮಿ ಕಳೆದುಕೊಂಡು ಪ್ರತಿ ರೈತನ ಕುಟುಂಬಕ್ಕೆ ಕೆಲಸ ನೀಡುವುದಾಗಿ ಭರವಸೆ ನೀಡಿ ಈಗ ಮಾತು ತಪ್ಪಿದ್ದಾರೆಂದು ಕರವೇ ನಾಯಕ ನಾರಾಯಣಗೌಡರು ಆರೋಪಿಸಿದರು.
ಕಂಪನಿಯ ಎಲ್ಲ ಘಟಕಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ನಿಯಮಾನುಸಾರ ಕೆಲಸ ನೀಡಬೇಕೆಂದು ಅವರು ಕಂಪನಿಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೋಂಡಾ ಕಂಪನಿ ಸೇರಿದಂತೆ ಹಲವಾರು ಕಂಪನಿಗಳಿಗೆ ರಾಜ್ಯ ಸರ್ಕಾರ ಎಲ್ಲಾ ಸವಲತ್ತುಗಳನ್ನು ಒದಗಿಸಿದೆ. ಹಾಗಾಗಿ ಕಂಪನಿಗಳು ರಾಜ್ಯದ ಮತ್ತು ಸ್ಥಳೀಯ ಕನ್ನಡಿಗರನ್ನು ನೇಮಕ ಮಾಡಿಕೊಳ್ಳದೇ ಬೇರೆ ರಾಜ್ಯದವರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಉದ್ಯಮ ನಿಮ್ಮದಾಗಿರಲ್ಲಿ, ಆದರೆ ಕೆಲಸಗಾರರು ಕನ್ನಡಿಗರಾಗಿರಬೇಕು ಎಂದ ಅವರು, ಇಂದು ಸಾಂಕೇತಿಕ ಪ್ರತಿಭಟನೆಗೆ ಸಾವಿರಾರು ಮಂದಿ ಸೇರಿದ್ದಾರೆ, ಒಂದು ವೇಳೆ ಕನ್ನಡಿಗರಿಗೆ ಕೆಲಸ ನೀಡದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಡಾ.ಸರೋಜಿನಿ ಮಹಷಿ ವರದಿಯಂತೆ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಸರ್ಕಾರದ ಜತೆ ಮಾಡಿಕೊಂಡಿರುವ ಒಪ್ಪಂದಂತೆ ಶೇ.85 ರಷ್ಟು ಸ್ಥಳೀಯರಿಗೆ ಎಲ್ಲಾ ವಿಭಾಗಗಳಲ್ಲೂ ಉದ್ಯೋಗ ನೀಡಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ಎಂದು ನಾರಾಯಣಗೌಡರು ವೀರಾವೇಷದಿಂದ ನುಡಿದರು. ಜೋಡಿ ಕೃಷ್ಣಾಪುರದಿಂದ ಸಾವಿರಾರು ಕರವೇ ಕಾರ್ಯಕರ್ತರು ಅದರಲ್ಲೂ ಮಹಿಳೆಯರು ಬೃಹತೆ ಮೆರವಣಿಗೆ ಮೂಲಕ ಸಾಗಿ ಬಂದು ಹೋಂಡಾ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು. ಕೆಲವರು ಕಾರ್ಖಾನೆಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಮುಂಜಾಗ್ರತಾ ಕ್ರಮವಾಗಿ ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ, ಸಂಚಾಲಕ ಬಸವರಾಜ ಪಡಕೋಟಿ, ಬಿ.ಎಚ್. ಸತೀಶಗೌಡ, ಕೋಲಾರ ಜಿಲ್ಲಾಧ್ಯಕ್ಷ ಎಂ.ಕೆ. ರಾಘವೇಂದ್ರ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಲೋಕೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅಂಬರೀಶ್, ಮಹಿಳಾ ಘಟಕದ ಸಿ.ಸಿ. ಹೇಮಲತಾ, ಚಿತ್ರ ರಮೇಶ್, ಸುಜಾತಮ್ಮ ಸೇರಿದಂತೆ ಸಾವಿರಾರು ಮಂದಿ ಇದ್ದರು.