ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿತ್ತನೆ ಬೀಜ, ಗೊಬ್ಬರಕ್ಕೆ ಕೊರತೆ ಆಗದಂತೆ ಎಚ್ಚರವಹಿಸಿ

Rashmi Kasaragodu
Updated On : 17 Jul 2013, 12:20 pm

ಕನ್ನಡಪ್ರಭ ವಾರ್ತೆ, ಕೋಲಾರ, ಜು.16
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಸೂಚನೆ ನೀಡಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಹವಾಮಾನದಿಂದ ಬೆಳೆ ನಾಶವಾಗುವ ರೈತರಿಗೆ ವಿಮೆ ಸೌಲಭ್ಯದಡಿ ಪರಿಹಾರ ಪಡೆಯುವ ಸಂಬಂಧ ಇಲಾಖೆಯಿಂದ ರೈತರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ತಿಳಿಸಿದರು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ, ಜಿಲ್ಲೆಯಲ್ಲಿ 1.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು ಈವರೆಗೆ 8775 ಹೆಕ್ಟೇರ್(ಶೇ. 9) ರಷ್ಟು ಬಿತ್ತನೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಹಂಗಾಮಿಗೆ 8215 ಹೆಕ್ಟೇರ್ ಪ್ರದೇಶಕ್ಕೆ ವಿವಿಧ ಬಿತ್ತನೆ ಬೀಜ ಅಗತ್ಯವಿದ್ದು,  4826 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗಿದೆ.  ನೆಲಗಡಲೆ ಹಾಗೂ ತೊಗರಿ ಬಿತ್ತನೆ ಅವಧಿ ಮುಗಿದಿರುವುದರಿಂದ  ಈ ಬಾರಿ ರಾಗಿ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ರಾಗಿ ಬಿತ್ತನೆಗೆ ಆಗಸ್ಟ್ವರೆಗೆ ಕಾಲಾವಕಾಶ ಇದೆ ಎಂದಾಗ  ಬಿತ್ತನೆ ಬೀಜ ಕೊರತೆಯಾದರೆ ದಾವಣಗೆರೆಯಿಂದ ತರಿಸಿ ಕೊಡಲಾಗುವುದು ಎಂದು ಬೀಜ ನಿಗಮದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ. ಫೆಡರೇಷನ್ನಲ್ಲಿ 8 ಸಾವಿರ ಮೆ. ಟನ್ ರಸಗೊಬ್ಬರ ದಾಸ್ತಾನು ಇದೆ.  ಶೇ. 75ರಷ್ಟು ರಸಗೊಬ್ಬರಗಳನ್ನು ಸಹಕಾರಿ ಸಂಸ್ಥೆಗಳ ಮೂಲಕವೇ ನೀಡಬೇಕೆಂಬ ಸರ್ಕಾರದ ಆದೇಶವಿರುವುದರಿಂದ  ಶ್ರೀನಿವಾಸಪುರದಲ್ಲಿ ಗೊಬ್ಬರ ವಿತರಣೆಗೆ  ಸ್ವಲ್ಪ ತೊಡಕಾಗಿದೆ ಎಂದರು.
ಶ್ರೀನಿವಾಸಪುರದಲ್ಲಿ ತಕ್ಕ ಮಟ್ಟಿನ ಸಾಮರ್ಥ್ಯ ಇರುವ  ಯಲ್ದೂರಿನ ಸೊಸೈಟಿ, ಟಿಎಪಿಸಿಎಂಎಸ್ ಹಾಗೂ ಮಣಿಗಾನಹಳ್ಳಿ ಸೊಸೈಟಿಗಳನ್ನು ಉತ್ತೇಜಿಸಿ ವಹಿವಾಟು ಆರಂಭಿಸಲು ಸೂಚಿಸಲಾಗುವುದು ಎಂದು ಸಹಕಾರ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಣಷಿ ಇಲಾಖೆಯ ಅಧಿಕಾರಿ ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ  ರಾಗಿ, ತೊಗರಿ ಹಾಗೂ ನೆಲಗಡಲೆ (ಮಳೆ ಆಶ್ರಿತ)  ಬೆಳೆಗೆ ಮಾತ್ರ ವಿಮೆ ಮಾಡಿಸಲು ಅವಕಾಶವಿದೆ ಎಂದರು.
ಜಿಲ್ಲೆಯ 27 ಹೋಬಳಿಗಳ ಪೈಕಿ 11 ಹೋಬಳಿಗಳಾದ  ಕೋಲಾರ ಕಸಬಾ, ವೇಮಗಲ್, ಸುಗಟೂರು,  ಬಂಗಾರಪೇಟೆಯ ಕಸಬಾ,  ಶ್ರೀನಿವಾಸಪುರ ಎಲ್ಲ 5 ಹೋಬಳಿಗಳು,  ಮುಳಬಾಗಲು ಕಸಬಾ, ಮಾಲೂರು ಕಸಬಾ ಹೋಬಳಿಗಳ ರೈತರು ಇದರ ಪ್ರಯೋಜನ ಪಡೆಯಬಹುದು.
ಬೆಳೆ ವಿಮೆಗೆ  ಮಾಡಿಸಿಕೊಳ್ಳಲು ಜು. 31 ಕಡೇ ದಿನ.  ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯ.  ಸಾಲ ಪಡೆಯದ 11ಹೋಬಳಿಗಳ  ರೈತರು ಕೂಡ ಬೆಳೆ ವಿಮೆ ಮಾಡಿಸಿಕೊಳ್ಳಬಹುದು ಎಂದರು.
ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ ಎಲ್ಲ 27 ಹೋಬಳಿಯ ರೈತರು ಕೂಡ ಅರ್ಹರಾಗಿದ್ದು,  ಬೆಳೆ ಸಾಲ ಪಡೆಯದ ರೈತರು ಬಿತ್ತಿದ. ನಾಟಿ ಮಾಡಿದ ನಂತರ 30ದಿನದೊಳಗೆ  ಅಥವಾ ಆ.31ರ ಒಳಗೆ  ಬ್ಯಾಂಕ್ಗೆ ಘೋಷಣೆ ಸಲ್ಲಿಸತಕ್ಕದ್ದು ಎಂದು ಹೇಳಿದರು.
ಕೃಷಿ ಇಲಾಖೆಯ ಅಧಿಕಾರಿಗಳಾದ ರವಿ, ತಾಲೂಕು ಕೃಷಿ ಅಧಿಕಾರಿ ಗಾಯತ್ರಿ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement