ವಿಭಿನ್ನವಾಗಿ ಶ್ರಾದ್ಧ ಆಚರಣೆ
ಶಿಡ್ಲಘಟ್ಟ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿಂದು ವಾರ್ಷಿಕ ಶ್ರಾದ್ಧ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಕಳೆದ ವರ್ಷ ಇದೇ ದಿನದಂದು ತಿರುಪತಿಗೆ ತೆರಳುತ್ತಿದ್ದ ಪುಟ್ಟ ಅರವಿಂದರವರ ಇಡಿ ಕುಟುಂಬ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ವಾರ್ಷಿಕ ಶ್ರಾದ್ಧ ಆಚರಿಸಲು ಮೃತ ರೀನಾ ಅರವಿಂದಳ ತಂದೆ ತಾಯಿ ಆರಾಧನಾ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಪಟ್ಟಣದ ಗಣ್ಯರನು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.
ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಪ್ರಮುಖರ ಸಮ್ಮುಖದಲ್ಲಿ ಆಧ್ಯಾತ್ಮದ ಬಗ್ಗೆ, ಹುಟ್ಟು ಸಾವಿನ ಬಗ್ಗೆ ಚಿಂತನ-ಮಂಥನ, ದೇಹ ಮತ್ತು ಆತ್ಮಗಳ ಬಗ್ಗೆ ಚರ್ಚೆ ಮತ್ತು ಧ್ಯಾನ ಹಾಗೂ ವಿಶಿಷ್ಠವಾದ ಮ್ಯೂಸಿಕ್ ಥೆರಪಿ ಮುಂತಾದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಗೌರಿಬಿದನೂರಿನ ಖ್ಯಾತ ಉಪನ್ಯಾಸಕ ಪ್ರೊಫೆಸರ್ ವರಾಹ ಮೂರ್ತಿಯವರು ವ್ಯಕ್ತಿತ್ವದ ಸಮಗ್ರತೆಯ ಬಗ್ಗೆ ಹಾಗೂ ಸಾವಿನ ಕುರಿತಾಗಿ ಮಾತನಾಡಿದರು.
ನೂರಾರು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮ ಯಾವುದೇ ಗದ್ದಲವಿಲ್ಲದೆ ನಡೆಯಿತು. ರಜತ ಅಜಯ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಲಕ್ಷ್ಮೀ ತಂಡದವರು ನಡೆಸಿಕೊಟ್ಟ ಮ್ಯೂಸಿಕ್ ಥೆರಪಿ ಸಭಿಕರನ್ನು ಮಾಯಾ ಲೋಕಕ್ಕೆ ಕರೆದೊಯ್ಯಿತು. ವಾಸವಿ ಮಹಿಳಾ ಮಂಡಳಿಯವರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು. ಶಾಸಕ ಎಂ.ರಾಜಣ್ಣ, ಆರ್ಯ ವೈಶ್ಯ ಮಂಡಳಿಯ ಆಧ್ಯಕ್ಷ ಎ.ಜಿ.ನಾಗೇಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರೂಪಸಿ ರಮೇಶ್, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.