ಹಲ್ಲೆ ಆರೋಪಿಗಳ ಸೆರೆಗೆ ಒತ್ತಾಯಿಸಿ ಪ್ರತಿಭಟನೆ
ಕೋಲಾರ: ತಾಲೂಕಿನ ತಂಬಳ್ಳಿ ಗ್ರಾಮದ ಭೂ ವಿವಾದಕ್ಕೆ ಸಂಬಂಧ ಪಟ್ಟಂತೆ ನಡೆದ ಘರ್ಷಣೆಯಲ್ಲಿ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ತಂಬಳ್ಳಿ ಗ್ರಾಮದ ಸರ್ವೇ ಸಂಖ್ಯೆ 14 ರಲ್ಲಿ 6 ಎಕರೆ ಜಮೀನು ಇದ್ದು, ಅದು ತೋಟ ಹಾಗೂ ನೀರಗಂಟಿ ಇನಾಂತಿ ಜಮೀನಾಗಿದೆ. ಇದನ್ನು ಗ್ರಾಮದ ಮುನಿಶಾಮಿ ಬಿನ್. ನಾರೆಪ್ಪ ಎಂಬುವರಿಗೆ ಮಂಜೂರಾಗಿದ್ದು ಸದರಿ ಜಮೀನನ್ನು ಹೈದರ್ ಸಾಭಿ ಎಂಬುವರು ಕಳೆದ 1962 ರಲ್ಲಿ ಕ್ರಯ ಮಾಡಿದ್ದರು.
ನಂತರ ಮುನಿಶಾಮಿ ರವರ ಮೊಮ್ಮಕ್ಕಳು ಈ ಜಮೀನನ್ನು ಬೆಂಗಳೂರಿನ ಮುಕುಂದರಾವ್ ಎಂಬುವರಿಗೆ ಮಾರಾಟ ಮಾಡಿದ್ದರು. ಈ ಕುರಿತು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿತ್ತು. ಎ.ಸಿ. ನ್ಯಾಯಾಲಯದಲ್ಲಿ ಜಮೀನು ದಾಖಲಾತಿಗಳನ್ನು ಪರಿಶೀಲಿಸುವವರೆಗೂ ಜಮೀನು ಉಳುಮೆ ಮಾಡಬಾರದು ಎಂದು ತಡೆಯಾಜ್ಞೆ ನೀಡಲಾಗಿದೆ. ಆದರೆ ಕಳೆದ ಭಾನುವಾರು ಗ್ರಾಮದ ಟಿ.ವಿ. ವೆಂಕಟಾಚಲಪತಿ, ಮುನಿಯಪ್ಪ, ಆನಂದ್, ರತ್ನಮ್ಮ, ವಿನಯಕುಮಾರ್, ಕೇಶವ, ಕಮ್ಮದಟ್ಟಿರವರು ಜಮೀನಿನಲ್ಲಿ ಅಕ್ರಮವಾಗಿ ಟ್ರ್ಯಾಕ್ಟರಿನಿಂದ ಉಳುಮೆ ಮಾಡಲು ಹೋಗಿದ್ದಾಗ ಉಳುಮೆ ಮಾಡಬಾರದು ಎಂದು ಹೈದರ್ ಸಾಬಿ ಕುಟುಂಬದವರಾದ ಖಾದರ್, ಗಪೂರ್, ಅಲ್ಲಾ ಬಕಾಷ್ ಹಾಗೂ ಅಬ್ದುಲ್ ಖಾದರ್ ಇವರು ಹೇಳಿದಾಗ ಇವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಲಾಗಿದ್ದು ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಎಸ್ಪಿ ಡಾ. ರಾಮ್ ನಿವಾಸ್ ಸಫಟ್ ಅವರು, ಎರಡು ಕಡೆಯ ದೂರುಗಳನ್ನು ದಾಖಲು ಮಾಡಲಾಗಿದೆ. ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.