ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಸೆಸ್ಸೆಲ್ಸಿ ಫಲಿತಾಂಶ ಉನ್ನತಿಗೆ ಕ್ರಿಯಾ ಯೋಜನೆ ಸಿದ್ಧ

Rashmi Kasaragodu
Updated On : 18 Jul 2013, 1:06 am

ಕ.ಪ್ರ.ವಾರ್ತೆ   ಕೋಲಾರ   ಜು.17
ಜಿಲ್ಲೆಯಲ್ಲಿ 2013ರ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ತೃಪ್ತಿದಾಯಕವಾಗಿದ್ದು ರಾಜ್ಯಕ್ಕೆ 4ನೇ ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲೂ ಮತ್ತೊಂದು ಸಾಧನೆಗಾಗಿ ಕ್ರಿಯಾ ಯೋಜನೆ ಸಿದ್ಧಗೊಳಿಸುವ ಕಾರ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜಾಗಿದೆ.
ಇಲಾಖೆಯ ಉಪನಿರ್ದೇಶಕರಾದ ಎಸ್.ವಿ. ಪದ್ಮನಾಭ್ ನೇತೃತ್ವದಲ್ಲಿ  ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಜಯರಾಮರೆಡ್ಡಿಯವರ  ತಂಡ 2013-14 ನೇ ಸಾಲಿನಲ್ಲೂ ಜಿಲ್ಲೆಯ ಘನತೆಯನ್ನು ಎತ್ತಿ ಹಿಡಿಯಲು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತಾದ ಮಾರ್ಗದರ್ಶಿಗೆ ಅಂತಿಮ ರೂಪ ನೀಡಲು ಸಿದ್ಧತೆ ನಡೆಸಿದ್ದಾರೆ.
ಫಲಿತಾಂಶ ಪಟ್ಟಿಯಲ್ಲಿ ಕೊನೆ ಸ್ಥಾನದಿಂದ ನೋಡಬೇಕೆಂಬ ಅಪಕೀರ್ತಿಗೆ ಒಳಗಾಗಿದ್ದ ಜಿಲ್ಲೆಯನ್ನು ಮೊದಲಿಂದ ನೋಡುವಷ್ಟರ ಮಟ್ಟಿಗೆ ಶೈಕ್ಷಣಿಕ ಸಾಧನೆಗಾಗಿ ಕಳೆದ ವರ್ಷಗಳಲ್ಲಿ ಇಲಾಖೆ ಕೈಗೊಂಡ ಕ್ರಮಗಳು ಸ್ಮರಣೀಯ.
2010-11ರಲ್ಲಿ ಸ್ಪೂರ್ತಿ ಮಾರ್ಗದರ್ಶಿಯೊಂದಿಗೆ ಗುರಿ ಸಾಧನೆಗೆ ಮೆಟ್ಟಿಲು ನಿರ್ಮಿಸಿಕೊಂಡ ಇಲಾಖೆ, 2011-12ನೇ ಸಾಲಿನಲ್ಲಿ ನವ್ಯಸ್ಪೂರ್ತಿ ಮಾರ್ಗದರ್ಶಿಯ ಮೂಲಕ 8ನೇ ಸ್ಥಾನದ ಹಿರಿಮೆಗೆ ಪಾತ್ರವಾಗಿ ಹುಬ್ಬೇರಿಸುವಂತೆ ಮಾಡಿತ್ತು.
ನಂತರ 2012-13 ನೇ ಸಾಲಿನಲ್ಲೂ ತನ್ನ ಸಾಧನೆಯಿಂದ ವಿಮುಖವಾಗಬಾರದು ಎಂದು ದೃಢ ನಿರ್ಧಾರ ಕೈಗೊಂಡು ಸ್ಫೂರ್ತಿ ಸೌರಭ ಮಾರ್ಗದರ್ಶಿಯ ಮೂಲಕ ದಿಟ್ಟ ಹೆಜ್ಜೆ ಇಟ್ಟಿತು.
ಫಲಿತಾಂಶ ಹೆಚ್ಚಾಗಿದ್ದು ಮಾತ್ರವಲ್ಲ, ಗುಣಾತ್ಮಕ ಫಲಿತಾಂಶಕ್ಕಾಗಿ ಇಲಾಖೆ ಸೇತುಬಂಧ, ಗುಂಪು ಅಧ್ಯಯನ, ದತ್ತು ಸ್ವೀಕಾರ, ಅಧ್ಯಾಯವಾರು ಪ್ರಶ್ನೆ ಪತ್ರಿಕೆ, ಪ್ರತಿ ವಿಷಯಕ್ಕೂ ತಲಾ 6 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಶಾಲೆಗಳಿಗೆ ಒದಗಿಸಿ, ಮಕ್ಕಳನ್ನು ನಿರಂತರವಾಗಿ ಗಮನಿಸಿಕೊಂಡು ಬರುವ ಮೂಲಕ ಜಿಲ್ಲೆ 4ನೇ ಸ್ಥಾನಕ್ಕೇರಿ ಜಿಲ್ಲೆಯ ಕೀರ್ತಿ ಬೆಳಗುವಂತಾಯಿತು.
87ಕ್ಕೇರಿದ ಶೇ.100: ಜಿಲ್ಲೆ ಶೇ.100 ಸಾಧನೆಯ ಶಾಲೆಗಳ ಪಟ್ಟಿಯಲ್ಲೂ ಗಣನೀಯ ಸಾಧನೆ ಮಾಡಿ ಹಿಂದಿನ ವರ್ಷ 47 ಇದ್ದದ್ದು 87ಕ್ಕೇರುವಂತೆ ಮಾಡಿ ಗಮನ ಸೆಳೆಯಿತು. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿಯೇ ಇರುವಾಗ ಅವರ ಆರೋಪಗಳಿಗೆ ದಿಟ್ಟ ಉತ್ತರ ನೀಡಿ 27 ಸರ್ಕಾರಿ ಶಾಲೆಗಳಿಗೆ ಶೇ.100 ಸಾಧನೆಯ ಹಿರಿಮೆ ಸಿಗುವ ಮೂಲಕ ಅಪವಾದ ಮುಕ್ತವಾಗಿಸಿತು.
ಕಳೆದ ಮಾರ್ಚ್ನಲ್ಲಿ ಪರೀಕ್ಷೆಗೆ ಕುಳಿತಿದ್ದ 20716 ಹೊಸ ಅಭ್ಯರ್ಥಿಗಳ ಪೈಕಿ 18441ಮಂದಿ ತೇರ್ಗಡೆಯಾಗಿ 89.02 ಮಂದಿ ತೇರ್ಗಡೆಯಾಗಿದ್ದು, ಫೇಲಾದವರು ಕೇವಲ 10.98 ಮಂದಿ ಮಾತ್ರ ಎಂಬುದು ಖುಷಿ ನೀಡುವ ವಿಷಯ.
ಫಲಿತಾಂಶದ ಗುಣಾತ್ಮಕತೆಯಲ್ಲೂ ಹಿಂದೆ ಬೀಳಲಿಲ್ಲ, 2011-12ರಲ್ಲಿ 670 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರೆ 2012-2013 ರಲ್ಲಿ 1045ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ದಾಖಲೆ ನಿರ್ಮಾಣವಾಗಿ ಈ ಪ್ರಮಾಣ  ಹಿಂದಿನ ವರ್ಷಕ್ಕಿಂತ ಶೇ.1.61 ರಷ್ಟು ಹೆಚ್ಚಾಗಿದೆ.
ಜಿಲ್ಲೆಯಲ್ಲಿ 130 ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 297 ಪ್ರೌಢಶಾಲೆಗಳಿವೆ, 87 ಶಾಲೆ ಶೇ.100 ಸಾಧನೆ ಮಾಡಿದ್ದು, 151 ಶಾಲೆ ಶೇ.80ಕ್ಕಿಂತ ಹೆಚ್ಚಿನ ಸಾಧನೆ ತೋರಿವೆ ಮತ್ತು ಶೇ.40ಕ್ಕಿಂತ ಕಡಿಮೆ ಸಾಧನೆ ಮಾಡಿದ ಶಾಲೆಗಳ ಸಂಖ್ಯೆ ಶೂನ್ಯ ಎಂಬುದು ಗಮನಾರ್ಹ.
ವಿಷಯವಾರು ಫಲಿತಾಂಶ ಗಮನಿಸಿದರೂ ಕೆಜಿಎಫ್ ಶೈಕ್ಷಣಿಕ ವಲಯ ಕನ್ನಡ ದ್ವಿತೀಯ ಭಾಷೆಯ ಫಲಿತಾಂಶದಲ್ಲಿ ಕುಸಿತ ಬಿಟ್ಟರೆ ಉಳಿದಂತೆ ಎಲ್ಲಾ ವಿಷಯಗಳಲ್ಲೂ ಉತ್ತಮ ಸಾಧನೆಯಾಗಿದೆ.
ಉರ್ದು ಮಾಧ್ಯಮದಲ್ಲಿ ಫಲಿತಾಂಶ ಕುಸಿತಗೊಂಡಿದೆ, ಬಾಲಕಿಯರು ಶೇ.64.75 ಹಾಗೂ ಬಾಲಕರು ಶೇ. 47.69 ರಷ್ಟು ತೇರ್ಗಡೆಯಾಗಿರುವುದು ಜಿಲ್ಲೆಯ ಫಲಿತಾಂಶಕ್ಕೆ ಪೆಟ್ಟು ನೀಡಿದೆ.
ಕನ್ನಡ ಮಾಧ್ಯಮದಲ್ಲಿ ಬಾಲಕರು ಶೇ.86.58ಹಾಗೂ ಬಾಲಕಿಯರು ಶೇ.88.45 ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಹಾಗೆಯೇ ಇಂಗ್ಲೀಷ್ ಮಾಧ್ಯಮದಲ್ಲಿ ಬಾಲಕರು ಶೇ.90.49 ಮತ್ತು ಬಾಲಕಿಯರು ಶೇ.93.01 ರಷ್ಟು ಮಂದಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.
ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ, ಕೆಜಿಎಫ್ ಶೈಕ್ಷಣಿಕ ವಲಯವಾರು ವಿವಿಧ ವಿಷಯಗಳಲ್ಲಿ ಆಗಿರುವ ಸಾಧನೆ ಮತ್ತು ಹಿನ್ನಡೆ ಕುರಿತು ಈಗಾಗಲೇ ಅಂಕಿ ಅಂಶ ಕಲೆಹಾಕಿದ್ದು, ಇದಕ್ಕೆ ಕಾರಣ ಹುಡುಕಲು ಫಲಿತಾಂಶ ವಿಶ್ಲೇಷಣೆಗೆ ಇಲಾಖೆ ಸಿದ್ಧತೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಬ್ಲಾಕ್ ವಾರು, ಲಿಂಗವಾರು, ವರ್ಗವಾರು, ವಿಷಯವಾರು ಫಲಿತಾಂಶದ ಸಾಧನೆ ಮತ್ತು ಹಿನ್ನಡೆ ಈ ಎರಡೂ ಅಂಶಗಳನ್ನೊಳಗೊಂಡ ವಿಶ್ಲೇಷಣಾ ವರದಿಯನ್ನು ಇಲಾಖೆ ಸಿದ್ಧಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement