ಚಿಕ್ಕಬಳ್ಳಾಪುರದಲ್ಲೂ ವಿತರಣೆ ಆರಂಭ
ಚಿಕ್ಕಬಳ್ಳಾಪುರ: ಮಕ್ಕಳಲ್ಲಿನ ರಕ್ತಹೀನತೆ ನಿವಾರಣೆಗಾಗಿ ವಾರಕ್ಕೊಮ್ಮೆ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಪೌಷ್ಟಿಕಾಂಶಗಳ ಮಾತ್ರೆಗಳನ್ನು ನೀಡುವ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ,ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪೌಷ್ಟಿಕಾಂಶ ಮಾತ್ರೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶೇ.50 ರಷ್ಟು ಬಾಲಕಿಯರಿಗೆ ರಕ್ತಹೀನತೆ, ನಿಶ್ಯಕ್ತಿ ಕಾಡುತ್ತಿದೆ. ಈ ಮಾತ್ರೆಗಳ ಬಳಕೆಯಿಂದ ಇವರು ಆರೋಗ್ಯವಂತರಾಗಿ ಹಾಗೂ ಹೆಚ್ಚು ಬುದ್ಧಿಶಾಲಿಗಳಾಗಿ ಬೆಳೆಯುತ್ತಾರೆ ಎಂದವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮಾತನಾಡಿ, ರಕ್ತ ಹೀನತೆ ಹಾಗೂ ಜಂತುಹುಳು ನಿವಾರಣೆಗೆ ಸರ್ಕಾರ ಮಾತ್ರೆಗಳನ್ನು ಮಕ್ಕಳಿಗೆ ನೀಡುತ್ತಿರುವುದು ಪ್ರಶಂಸಾರ್ಹ. ಇದು ಹಳ್ಳಿಹಳ್ಳಿಗೂ ತಲುಪಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯ್ಕುಮಾರ್ ಮಾತನಾಡಿ, ಸರ್ಕಾರವು 10-19 ವರ್ಷದೊಳಗಿನ ಮಕ್ಕಳಿಗೆ ಕಬ್ಬಿಣ ಮತ್ತು ಪೋಲಿಕ್ ಆಸಿಡ್ ಗುಳಿಗೆಗಳನ್ನು ವಾರಕ್ಕೊಮ್ಮೆ ನೀಡುವ ಕಾರ್ಯಕ್ರಮ (ಗಿಐಋಖ) ದೇಶಾದ್ಯಂತ ಪ್ರಾರಂಭವಾಗಿದ್ದು ದೇಶದ 13 ಕೋಟಿ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಸಾಂಕೇತಿಕವಾಗಿ ಮಾತ್ರೆಗಳ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಪ್ರಸಾದ್, ಬಿಇಓ ರಘುನಾಥರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಅಶ್ವತ್ಥಯ್ಯ ಉಪಸ್ಥಿತರಿದ್ದರು.