ಚುನಾವಣೆ ಕಣದಲ್ಲಿ 2 ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ: ನಗರದ 30 ನೇ ವಾರ್ಡು (ಚಾಮರಾಜಪೇಟೆ)ಅಂಬೇಡ್ಕರ್ ಕಾಲೋನಿಯ ನಗರಸಭಾ ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕಡೆ ದಿನವಾಗಿದ್ದು ಇದೀಗ ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಕಾಂಗ್ರೆಸ್ಸಿಂದ ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ 2 ನಾಮಪತ್ರಗಳನ್ನು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ 1 ನಾಮಪತ್ರವನ್ನು ಸಲ್ಲಿಸಿದ್ದು ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ರಾಜ್ಯದೆಲ್ಲೆಡೆ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆ ಘೋಷಣೆಯಾದಂತೆ ನಗರದ 30 ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಗೂ ನಗರಸಭಾ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ಚುನಾವಣೆಯನ್ನು ನಡೆಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಆಗ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರು. ನಗರದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಂಬೇಡ್ಕರ್ ಕಾಲೋನಿಯಲ್ಲಿ ನೂತನ ರೈಲ್ವೆ ಹಳಿ ನಿರ್ಮಾಣ ಕೆಲಸ ನಡೆಸಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಕಳೆದ ಅನೇಕ ದಶಕಗಳಿಂದ ವಾಸ ಮಾಡುತ್ತಿದ್ದ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಮಗೆ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸುವ ಭರವಸೆಯನ್ನು ಮರೆತು ಹೋಗಿದ್ದು ಕಾಲೋನಿಯೇ ಇಲ್ಲದಿರುವಾಗ ಚುನಾವಣೆ ಏತಕ್ಕೆ ಎಂದು ಚುನಾವಣೆಯಲ್ಲಿ ನಿವಾಸಿಗಳು ಭಾಗವಹಿಸಿರಲಿಲ್ಲ. 11 ಮಂದಿ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದರೂ ನಿವಾಸಿಗಳು ಒತ್ತಡವನ್ನು ಹೇರಿ ಅವರು ತಮ್ಮ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.ಮತ್ತೆ ಚುನಾವಣೆ: ಇದೀಗ ಅಂಬೇಡ್ಕರ್ ಕಾಲೋನಿಗೆ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಲು ಮತ್ತೆ ಚುನಾವಣೆ ಘೋಷಣೆಯಾಗಿದ್ದು ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ ಎರಡು ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದು ಇವರಿಗೆ ಪ್ರತಿಸ್ಪರ್ಧಿಯಾಗಿ ಶ್ರೀನಿವಾಸ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದೀಗ ನಾಮಪತ್ರವನ್ನು ಸಲ್ಲಿಸುವ ಅವಕಾಶ ಮುಗಿದು ಹೋಗಿದ್ದು ನಾಮಪತ್ರದ ಪರಿಶೀಲನೆ ಜು.18 ರಂದು ನಡೆಯಲಿದೆ. ಜು.20 ರಂದು ನಾಮಪತ್ರವನ್ನು ವಾಪಸ್ ಪಡೆಯಲು ಅವಕಾಶವಿದ್ದು ಜು.28 ರಂದು ಮತದಾನ ನಡೆಯಲಿದೆ. ಆ. 4ರಂದು ಗ್ರಾಪಂ ಮರು ಚುನಾವಣೆ
ಮಾಲೂರು: ಗ್ರಾಮಪಂಚಾಯ್ತಿ ಸದಸ್ಯರ ಸಾವಿನಿಂದ ತೆರವಾಗಿರುವ ತಾಲೂಕಿನ ಮೂರು ಪಂಚಾಯ್ತಿಗಳ ಮರು ಚುನಾವಣೆ ಆ.4 ರಂದು ನಡೆಯಲಿದೆ ಎಂದು ತಹಸೀಲ್ದಾರ್ ನಂಜಯ್ಯ ತಿಳಿಸಿದ್ದಾರೆ. ಅವರು ಕನ್ನಡ ಪ್ರಭದೊಂದಿಗೆ ಮಾತನಾಡುತ್ತ, ತಾಲೂಕಿನ ಕೊಂಡಶೆಟ್ಟಿ ಹಳ್ಳಿ ಹೋಬಳಿಯ ಕುಂಟನಹಳ್ಳಿ ಪಂಚಾಯ್ತಿ ಸದಸ್ಯೆ ರತ್ನಮ್ಮರವರ ರಾಜಿನಾಮೆ ಹಾಗೂ ನಿಧನರಾದ ಅದೇ ಹೋಬಳಿಯ ನಕ್ಕನಹಳ್ಳಿ ಪಂಚಾಯ್ತಿಯ ಗುರುಪ್ಪ ಹಾಗೂ ಜಯಮಂಗಲದ ಸಿದ್ದನಹಳ್ಳಿ ಗೋಪಾಲ್ರಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಇದೇ ತಿಂಗಳ 24 ಕೊನೆಯ ದಿನ ಎಂದರು. ಜುಲೈ 25 ರಂದು ನಾಮಪತ್ರ ಪರಿಶೀಲನೆ ಹಾಗೂ 27 ರಂದು ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
'ಪ್ರವಾಸದಿಂದ ಮಾನಸಿಕ ನೆಮ್ಮದಿ'
ಟೇಕಲ್: ಮಾನಸಿಕ ನೆಮ್ಮದಿಗಾಗಿ ಮನುಷ್ಯ ಬೇರೆ ಸ್ಥಳಗಳನ್ನು ವೀಕ್ಷಿಸಿದಾಗ ಮನಸ್ಸಿನ ಏರಿಳಿತಗಳು ಒಂದು ಗೂಡುತ್ತವೆ. ಅದರಂತೆ ಪ್ರವಾಸಗಳನ್ನು ಕೈಗೊಂಡರೆ ವಿವಿಧ ರೀತಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮಾನಸಿಕ ನೆಮ್ಮದಿ ಉಂಟಾಗುತ್ತದೆ ಎಂದು ಮಾಜಿ ತಾ.ಪಂ. ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕೆ.ವೈ. ನಂಜೇಗೌಡರು ನುಡಿದರು. ಅವರು ಟೇಕಲ್ ಸಂಕೀರ್ಣದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ವಿಸ್ತರಣಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಹೊರಟಿದ್ದ ಕರ್ನಾಟಕ ಪ್ರವಾಸಕ್ಕೆ ಇತ್ತೀಚೆಗೆ ಕೆ.ಜಿ.ಹಳ್ಳಿಯ ವಿನಾಯಕಸ್ವಾಮಿ ದೇವಾಲಯದ ಬಳಿ ಚಾಲನೆ ನೀಡಿ ಮಾತನಾಡಿದರು.