ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ವಾತಾವರಣ ನಿರ್ಮಿಸಿ

Rashmi Kasaragodu
Updated On : 18 Jul 2013, 1:04 am

ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಜು.17
ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಂತಹ ಆಕರ್ಷಕ ವಾತಾವರಣವನ್ನು ನಿರ್ಮಾಣ ಮಾಡುವಂತಹ ಮಹತ್ತರವಾದ ಜವಾಬ್ದಾರಿಯನ್ನು ಶಿಕ್ಷಕರು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಜಿತ್ಪ್ರಸಾದ್ ಸಲಹೆ ನೀಡಿದರು.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಿಸ್ಲೆಪ್, ಅಜೀಂ ಪ್ರೇಮ್ಜಿ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಪಾಲಿಸಿ ಪ್ಲಾನಿಂಗ್ ಘಟಕ ಮತ್ತು ಇಫಿಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಸಮುದಾಯದ ಸಹಕಾರವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಶಾಲೆ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುವಂತೆ ಮಾಡಬೇಕು. ಈ ಮೂಲಕ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದರು.
ಮುಖ್ಯ ಶಿಕ್ಷಕ ಶಾಲೆಯ ನಾಯಕನಾಗಿದ್ದು ಆದರೂ ಸರ್ವಾಧಿಕಾರಿ ಧೋರಣೆ ತೋರದೇ ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಎಲ್ಲಾ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು.ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಆಗ ಮಾತ್ರ ಶೈಕ್ಷಣಿಕ ಗುರಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಪಾಲಿಸಿ ಪ್ಲಾನಿಂಗ್ ಘಟಕ ಮತ್ತು ಇಫಿಲ್ ಸಂಸ್ಥೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಾಲಾ ನಾಯಕತ್ವ ಗುಣಗಳನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತರಬೇತಿ ನೀಡುತ್ತಿದ್ದು ಇದನ್ನು ಶಿಕ್ಷಕರು ಸದುಪಯೋಗಪಡಿಸಿಕೊಳ್ಳಬೇಕು.
ಖಾಸಗೀ ಶಾಲೆಯನ್ನು ಮೀರಿಸುವ ರೀತಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು.ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿಗೆ ಬರುವಂತೆ ಮಾಡಬೇಕೆಂದು ತಿಳಿಸಿದರು.
ಡಯಟ್ ಪ್ರಾಂಶುಪಾಲೆ ಮತ್ತು ಉಪ ನಿರ್ದೇಶಕಿ (ಅಭಿವೃದ್ಧಿ) ವಿ.ಎಸ್. ಗೀತಾ ಮಾತನಾಡಿ, ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಅನೇಕ ತರಬೇತಿಗಳನ್ನು ನೀಡಲಾಗಿದೆಯಾದರೂ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವು ಇತರೆ ತರಬೇತಿ ಕಾರ್ಯಕ್ರಮಗಳಿಗಿಂತ ಭಿನ್ನವಾಗಿದೆ. ಇಲ್ಲಿ ತರಬೇತಿಯನ್ನು ಪಡೆದುಕೊಳ್ಳುವ ಶಿಕ್ಷಕರು ಶಾಲೆಗಳಲ್ಲಿ ಅನ್ವಯ ಮಾಡಿಕೊಂಡು ಪ್ರಗತಿಯನ್ನು ಸಾಧಿಸಬೇಕು. ತಮಗೆ  ಸಮಸ್ಯೆಗಳು ಎದುರಾದಲ್ಲಿ ಅಗತ್ಯ ಮಾರ್ಗದರ್ಶನವನ್ನು ಪಡೆದುಕೊಂಡು ಬಗೆಹರಿಸಿಕೊಳ್ಳಬೇಕೆಂದರು.   
ಎಸ್ಎಲ್ಡಿಪಿ ನೋಡಲ್ ಅಧಿಕಾರಿ ಮತ್ತು ಡಯಟ್ನ ಹಿರಿಯ ಉಪನ್ಯಾಸಕ ಆರ್. ಶ್ರೀನಿವಾಸ್ ಮಾತನಾಡಿ, ಶಾಲೆಗಳು ಸಕಾರಾತ್ಮಕವಾಗಿ ಬದಲಾವಣೆಯಾಗಲು ಮೊದಲು ನಮ್ಮ ವರ್ತನೆ, ಮನೋಭಾವದಲ್ಲಿ ಬದಲಾವಣೆಯಾಗಬೇಕು. ನಂತರ ಯೋಜನೆಯನ್ನು ರೂಪಿಸಿ, ಕಾರ್ಯ ನಿರ್ವಹಣೆಯ ಮೌಲ್ಯಮಾಪನ ಮಾಡಿಕೊಳ್ಳಬೇಕೆಂದ ಅವರು, ಒಂದು ಶಾಲೆ ಚೆನ್ನಾಗಿ ಅಭಿವೃದ್ಧಿ ಕಾಣಬೇಕಾದರೆ, ಮುಖ್ಯಶಿಕ್ಷಕರು ಮತ್ತು ಶಿಕ್ಷಕರಲ್ಲಿ ನಾಯಕತ್ವ ಗುಣ ಬೆಳೆಯಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎನ್ ವೆಂಕಟೇಶಪ್ಪ, ಉಪನ್ಯಾಸಕರಾದ ಹಸೀನಾ ಬೇಗಂ, ರಾಧಾಕೃಷ್ಣ, ಇಫಿಲ್ ಸಂಸ್ಥೆಯ ಪದಾಧಿಕಾರಿಗಳು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement