ಮದುವೆ ಒಲ್ಲದ ಯುವತಿಗೆ ಮಚ್ಚಿನೇಟು
ಕ.ಪ್ರ.ವಾರ್ತೆ ಕೋಲಾರ ಜು. 17
ಮದುವೆಗೆ ಒಲ್ಲದ ಯುವತಿಯ ಮೇಲೆ ಪ್ರಿಯಕರ ಮಚ್ಚಿನಿಂದ ಹಲ್ಲೆ ನಡೆಸಿ ನಂತರ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಗಾಂಧಿನಗರದಲ್ಲಿ ಬುಧವಾರ ನಡೆದಿದೆ.
ಯುವಕನಿಂದ ಹಲ್ಲೆಗೆ ಒಳಗಾಗಿರುವ ಸೌಮ್ಯಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಹಾಗೂ ಆತ್ಮಹತ್ಯೆಗೆ ಯತ್ನಿಸಿರುವ ಯುವಕ ನರಸಿಂಹಪ್ಪನನ್ನು ಜಿಲ್ಲಾ ಸರ್ಕಾರಿ ಎಸ್.ಎನ್.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೋಲಾರದ ಗಾಂಧಿನಗರದ ನಿವಾಸಿ ಸೌಮ್ಯ ಮನೆಗೆ ಬಂದ ನರಸಿಂಹಪ್ಪ ಎಂಬುವನು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾನೆ. ನಮ್ಮಿಬ್ಬರ ಮದುವೆಗೆ ಹಿರಿಯರು ಒಪ್ಪುವುದಿಲ್ಲ, ಜತೆಗೆ ಸಾಕಷ್ಟು ಸಮಸ್ಯೆಗಳು ಇರುವುದರಿಂದ ನಿನ್ನನ್ನು ಮದುವೆ ಆಗಲು ಸಾಧ್ಯವಿಲ್ಲವೆಂದು ಸೌಮ್ಯ ಹೇಳಿದರೂ ಇದಕ್ಕೆ ಒಪ್ಪದೆ ಕುಪಿತನಾಗಿ ಆಕೆಯ ಮೇಲೆ ಹಲ್ಲೆ ನಡೆಸಲೆಂದೇ ಸಿದ್ಧನಾಗಿ ಬಂದಿದ್ದ ನರಸಿಂಹಪ್ಪ ತನ್ನ ಬ್ಯಾಗಿನಿಂದ ಮಚ್ಚನ್ನು ಹೊರ ತೆಗೆದು ಮನ ಬಂದಂತೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆಂದು ಗಲ್ ಪೇಟೆ ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಕಂಬದಿಂದ ಬಿದ್ದ: ಘಟನೆ ನಡೆದಾಗ ಮನೆಯಲ್ಲಿದ್ದ ಸೌಮ್ಯಳ ತಂಗಿ ಸಂಧ್ಯಾ, ತಕ್ಷಣ ಇದನ್ನು ತಡೆಯಲು ಹೋದಾಗ ಆಕೆಯ ಮೇಲೂ ನರಸಿಂಹಪ್ಪ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿದ್ದ ಸೌಮ್ಯಳನ್ನು ಕಂಡ ತಂಗಿ ಸಂಧ್ಯಾ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲಿ ನರಸಿಂಹಪ್ಪ ಮನೆಯ ಪಕ್ಕದಲ್ಲಿ ಇರುವ ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾನಲ್ಲದೆ, ಬೇರೊಂದು ಮನೆಯ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸೌಮ್ಯ ಹಾಗೂ ಆಕೆಯ ತಂಗಿ ಸಂಧ್ಯಾಳನ್ನು ಅಕ್ಕ ಪಕ್ಕದ ಮನೆಯವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದರು. ತೀವ್ರವಾಗಿ ಗಾಯಗೊಂಡಿದ್ದ ನರಸಿಂಹಪ್ಪನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿಸಿದ್ದಾರೆ.
ನರ್ಸಿಂಗ್ ಶಾಲೆಯಿಂದ ಪ್ರೀತ್ಸೆ..: ಕಳೆದ ಎರಡು ವರ್ಷದ ಹಿಂದೆ ಸೌಮ್ಯ ಬಂಗಾರಪೇಟೆ ತಾಲೂಕಿನ ಸರಸ್ವತಿ ನರ್ಸಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅದೇ ಕಾಲೇಜಿನಲ್ಲಿ ಶ್ರೀನಿವಾಸಪುರ ತಾಲೂಕಿನ ಸೊಣ್ಣಹಳ್ಳಿಯ ನರಸಿಂಹಪ್ಪ ಕೂಡ ಒದುತ್ತಿದ್ದು, ಸೌಮ್ಯಳನ್ನು ನರಸಿಂಹಪ್ಪ ಪ್ರೀತಿಸುತ್ತಿದ್ದ. ಆದರೆ ಸೌಮ್ಯ ಇದಕ್ಕೆ ನಿರಾಕರಿಸುತ್ತಲೇ ಬಂದಿದ್ದಳು ಎನ್ನಲಾಗಿದೆ. ವಿದ್ಯಾಭ್ಯಾಸ ಮಗಿದ ಮೇಲೆ ಸೌಮ್ಯ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೆಲಸಕ್ಕೆ ಸೇರಿದರು.ನರಸಿಂಹಪ್ಪ ಚೆನ್ನೈನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಆಗಾಗ ಸೌಮ್ಯಳನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದನಲ್ಲದೆ, ಬುಧವಾರ ಬೆಳಗ್ಗೆ ಸೌಮ್ಯಳ ಮನೆಗೆ ಬಂದು ಮದುವೆಗೆ ಒತ್ತಾಯಿಸಿ ಆಕೆ ನಿರಾಕರಿಸಿದಾಗ ಹಲ್ಲೆ ಮಾಡಿದ್ದಾನೆ.