ಮಳೆ, ಬೆಳೆಗೆ ಸುರಸದ್ಮಗಿರಿ ರಾಮಲಿಂಗೇಶ್ವರನಿಗೆ ಕುಂಬಾಭೀಷೇಕ
ಕ.ಪ್ರ.ವಾರ್ತೆ ಗುಡಿಬಂಡೆ ಜು. 17
ಸುರಸದ್ಮಗಿರಿಯಲ್ಲಿ ನೆಲೆಸಿರುವ ಪ್ರಸನ್ನ ಪಾರ್ವತಿ ಸಮೇತ ರಾಮಲಿಂಗೇಶ್ವರ ಸ್ವಾಮಿಗೆ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಕುಂಬಾಭೀಷೇಕ ನೆರವೇರಿಸಲಾಯಿತು. ಪಟ್ಟಣದ ಪಂಚಲಿಂಗೇಶ್ವರ ದೇವಾಲಯ ಟ್ರಸ್ಟ್ಹಾಗೂ ಸ್ಥಳೀಯ ಭಕ್ತಾದಿಗಳು ಆಯೋಜಿಸಿದ್ದ ರಾಮಲಿಂಗೇಶ್ವರ ಕುಂಬಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ರುದ್ರಹೋಮ, ವಿಶೇಷ ಪೂಜೆಗಳು, ಪಂಚಾಮೃತ ಅಭಿಷೇಕ ಮೊದಲಾದ ವಿದಿವಿಧಾನಗಳ ಮೂಲಕ ಗಂಗ ಪೂಜೆಯನ್ನು ವೇದಪಂಡಿತರು ಮಾಡುವ ಮೂಲಕ ಕುಂಬಾಭಿಷೇಕಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಬೆಟ್ಟಕ್ಕೆ ಆಗಮಿಸಿ ಶಿವ ಸ್ಮರಣೆಯನ್ನು ಮಾಡುತ್ತಾ ಚಿಕ್ಕ ಚಿಕ್ಕ ಕೊಡಗಳ ಮೂಲಕ ನೀರನ್ನು ರಾಮಲಿಂಗೇಶ್ವರನ ಮಜ್ಜನಕ್ಕೆ ತರಲು ಮುಂದಾಗಿದ್ದು ನೋಡುಗರ ಕಣ್ಣಿಗೆ ರಾಮಾಯಣದ ಅಳಿಲು ಕಥೆಯನ್ನು ನೆನಪಿಸುವಂತಿತ್ತು.